ADVERTISEMENT

ಮಂಗಳೂರಿನ ನೀರುಮಾರ್ಗದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 16:09 IST
Last Updated 3 ನವೆಂಬರ್ 2022, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ತಾಲ್ಲೂಕಿನ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರವೊಂದರ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ.

ಈ ಹಂದಿ ಸಾಕಾಣಿಕಾ ಕೇಂದ್ರದಿಂದ 1 ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು 10 ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ರೋಗಪೀಡಿತ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಆ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಹಾಗೂ ಅಲ್ಲಿಗೆ ಸಾರ್ವಜನಿಕರು ಭೇಟಿ ನೀಡದಂತೆ ನಾಮಫಲಕ ಅಳವಡಿಸುವಂತೆ ಸೂಚಿಸಲಾಗಿದೆ.

ADVERTISEMENT

ಆಫ್ರಿಕನ್ ಹಂದಿ ಜ್ವರವು ಹಂದಿಗಳಿಂದ ಅಥವಾ ಮಾಂಸ ಸೇವಿಸುವುದರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಹಂದಿ ಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದಾಗ್ಯೂ ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು ಎಂದು ಅವರು ಹೇಳಿದ್ದಾರೆ.

ಜಾಗೃತ ವಲಯದಲ್ಲಿರುವ ಹಂದಿ ಸಾಕಾಣಿಕೆದಾರರು ಮತ್ತು ಇತರರು ಸಧ್ಯಕ್ಕೆ ರೋಗ ಪೀಡಿತ ವಲಯಕ್ಕೆ ಭೇಟಿ ನೀಡಬಾರದು. ಅಪರಿಚಿತರಿಂದ ಹಂದಿ ಮರಿಗಳನ್ನು ಮತ್ತು ಮಾಂಸವನ್ನು ಖರೀದಿಸಬಾರದು. ತಮ್ಮ ಹಂದಿ ಸಾಕಾಣಿಕಾ ಕೇಂದ್ರಗಳನ್ನು ಬಿಸಿ ನೀರಿನಿಂದ ತೊಳೆದು, ಕ್ರಿಮಿ ನಾಶಕಗಳನ್ನು ಸಿಂಪಡಿಸುತ್ತಿರಬೇಕು. ಹಂದಿಗಳಿಗೆ ನೀಡಲಾಗುವ ಹೋಟೆಲ್ ತ್ಯಾಜ್ಯ ನೀಡದಿರುವುದು ಒಳಿತು. ಅನಿವಾರ್ಯ ಸಂದರ್ಭದಲ್ಲಿ ಚೆನ್ನಾಗಿ ಬೇಯಿಸಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.