ADVERTISEMENT

ಮಂಗಳೂರು: ಸ್ವರ್ಣ ಸಂಭ್ರಮ ತಂದ ‘ಅಕ್ಷಯ ತೃತೀಯಾ’

​ಪ್ರಜಾವಾಣಿ ವಾರ್ತೆ
Published 11 ಮೇ 2024, 5:53 IST
Last Updated 11 ಮೇ 2024, 5:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಶುಕ್ರವಾರ ನಗರದ ಎಲ್ಲ ಚಿನ್ನಾಭರಣ ಮಳಿಗೆಗಳ ಎದುರು ವಾಹನಗಳ ಸಾಲು. ಹವಾನಿಯಂತ್ರಿತ ಮಳಿಗೆಯ ಒಳಗೆ ಜನದಟ್ಟಣೆ, ನವೀನ ವಿನ್ಯಾಸದ ಆಭರಣಗಳನ್ನು ನೋಡುವ ತವಕ. ಹತ್ತಾರು ಹಾರಗಳನ್ನು ಕೊರಳಿಗೆ ಧರಿಸಿ, ಕನ್ನಡಿಯೆದುರು ಸಂಭ್ರಮಿಸುವ ಪರಿ, ಕೊನೆಯಲ್ಲಿ ಆಯ್ದ ಒಂದೆರಡನ್ನು ಖರೀದಿಸಿದ ಖುಷಿ..

ಈ ಖುಷಿಗೆ ಅವಕಾಶ ಕಲ್ಪಿಸಿದ್ದು ‘ಅಕ್ಷಯ ತೃತೀಯಾ’ ಹಬ್ಬ. ಈ ವಿಶೇಷ ದಿನದಂದು ಚಿನ್ನ, ವಜ್ರಾಭರಣಗಳನ್ನು ಖರೀದಿಸಿದರೆ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ, ಜನರು ಶುಕ್ರವಾರ ಚಿನ್ನಾಭರಣ ಮಳಿಗೆಗಳಿಗೆ ತೆರಳಿ ಚಿನ್ನವನ್ನು ಖರೀದಿಸಿದರು.

ADVERTISEMENT

ಕುಟುಂಬ ಸಮೇತರಾಗಿ ಬಂದಿದ್ದ ಗ್ರಾಹಕರು ಚಿನ್ನವನ್ನು ಖರೀದಿಸಿ, ಮನೆಗೆ ಕೊಂಡೊಯ್ದು ದೇವರ ಮುಂದಿಟ್ಟು ಪೂಜಿಸಿದರು. ವಾರದ ಹಿಂದೆಯೇ ತಮಗೆ ಬೇಕಾದ ಆಭರಣಗಳನ್ನು ಆಯ್ಕೆ ಮಾಡಿಟ್ಟು ಹೋಗಿದ್ದ ಕೆಲವರು, ಹಬ್ಬದ ದಿನ ಬಿಲ್ ಪಾವತಿಸಿ ಆಭರಣದ ಮಾಲೀಕರಾದರು.

‘ಹಬ್ಬದ ದಿನ ನಮಗೆ ಬೇಕಾದ ವಿನ್ಯಾಸದ ಆಭರಣದ ಆಯ್ಕೆ ಕಷ್ಟವಾಗುತ್ತದೆ. ಮಳಿಗೆಗಳಲ್ಲಿ ಹೆಚ್ಚಿನ ಗ್ರಾಹಕರು ಇರುತ್ತಾರೆ. ಹೀಗಾಗಿ, ಒಂದು 10 ದಿನಗಳ ಹಿಂದೆಯೇ ಮಗಳಿಗೆ ಬೇಕಾದ ಆಭರಣ ಆಯ್ಕೆ ಮಾಡಿಟ್ಟು ಹೋಗಿದ್ದೆ’ ಎಂದು ಚಿನ್ನ ಖರೀದಿಗೆ ಬಂದಿದ್ದ ಕರಂಗಲ್ಪಾಡಿಯ ನಯನಾ ಹೇಳಿದರು.

ನಗರದ ಎಸ್‌.ಎಲ್‌.ಶೇಟ್, ಭೀಮ ಜುವೆಲ್ಲರ್ಸ್, ಜೋಯ್‌ಲುಕ್ಕಾಸ್, ಜೋಸ್‌ಲುಕ್ಕಾಸ್, ಆಭರಣ, ಕಲ್ಯಾಣ್ ಜುವೆಲ್ಲರ್ಸ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌, ತನಿಷ್ಕ್‌ ಸೇರಿದಂತೆ ಬಹುತೇಕ ಎಲ್ಲ ಬಂಗಾರದ ಆಭರಣಗಳ ಮಳಿಗೆಗಳಲ್ಲೂ ಬೆಳಗಿನಿಂದ ಸಂಜೆಯವರೆಗೂ ಜನದಟ್ಟಣೆ ಇತ್ತು. ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ಸಹ ನೀಡಲಾಗಿತ್ತು.

‘ಅಕ್ಷಯ ತೃತೀಯಾ ಪವಿತ್ರ ದಿನ. ಈ ದಿನ ಸಹಜವಾಗಿ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಉಳಿದ ದಿನಗಳಿಗೆ ಹೋಲಿಸಿದರೆ ದುಪ್ಪಟ್ಟು ಗ್ರಾಹಕರು ಭೇಟಿ ನೀಡಿದ್ದರು. ಸಾಂಪ್ರದಾಯಿಕ ಆಭರಣಗಳು, ಚಿನ್ನದ ಆಭರಣಗಳು, ವಜ್ರದ ಆಭರಣಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಹಬ್ಬಕ್ಕೆ ಒಂದು ವಾರದ ಮುಂಚಿನಿಂದ ಹಬ್ಬದವರೆಗೆ ಆಭರಣ ಖರೀದಿ ಮೇಲೆ ನಾವು ರಿಯಾಯಿತಿಯನ್ನೂ ಕೊಡುತ್ತೇವೆ’ ಎಂದು ನಗರದ ಕೆ.ಎಸ್.ರಾವ್ ರಸ್ತೆಯ ಎಸ್.ಎಲ್.ಶೇಟ್ ಜುವೆಲ್ಲರ್ಸ್ ಆ್ಯಂಡ್ ಡೈಮಂಡ್ ಹೌಸ್‌ನ ಪಾಲುದಾರ ಪ್ರಶಾಂತ್ ಶೇಟ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.