ಸುಬ್ರಹ್ಮಣ್ಯ: ಕಾರ್ಗಿಲ್ ವಿಜಯ ದಿನದ ಗೌರವಾರ್ಥ ಭಾರತೀಯ ಸೇನೆಯು ಆಯೋಜಿಸಿದ್ದ 25 ಮಹಿಳೆಯರ, 2 ಸಾವಿರ ಕಿ.ಮೀ.ನ ‘ಆಲ್ ವುಮನ್ ಬೈಕ್ ರ್‍ಯಾಲಿ’ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಗುತ್ತಿಗಾರಿನ ವೃಷ್ಠಿ ಮಲ್ಕಜೆ ಅವರು ಭಾಗವಹಿಸಿದ್ದರು.
ವೃಷ್ಠಿ ಅವರು ವಕೀಲ, ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರಿನ ಪುರುಷೋತ್ತಮ ಮಲ್ಕಜೆ, ಉಷಾ ಮಲ್ಕಜೆ ದಂಪತಿಯ ಪುತ್ರಿ.
2 ಸಾವಿರ ಕಿ.ಮೀ.ನ ಈ ರ್‍ಯಾಲಿಯಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಸೈನಿಕರ ಕುಟುಂಬದ ಮಹಿಳೆಯರು ಭಾಗವಹಿಸಿದ್ದರು. ವೃಷ್ಠಿ ಮಾತ್ರ ಸೇನಾ ಕುಟುಂಬದ ಹೊರತಾಗಿ ಭಾಗವಹಿಸಿದ್ದರು.
ಜುಲೈ 4ರಂದು ಹಿಮಾಚಲ ಪ್ರದೇಶದ ಲೇಹ್‌ನಿಂದ ಆರಂಭಗೊಂಡ ರ್‍ಯಾಲಿ ಲಡಾಖ್‌ನ ವಿವಿಧ ಸ್ಥಳಗಳ ಮೂಲಕ ಕಾರ್ಗಿಲ್ ಹುತಾತ್ಮರ ಸ್ಮಾರಕಕ್ಕೆ ತಲುಪಿತು. ಕರದುಂಗ್ ಲಾ ಮತ್ತು ಓಮ್ಲಿಂಗ್ ಲಾ ಪರ್ವತದಲ್ಲೂ ಬೈಕ್ ರ್‍ಯಾಲಿ ಸಾಗಿತ್ತು.
ವೃಷ್ಠಿ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಬ ಕ್ನಾನಾಯ ಜ್ಯೋತಿ, ಸುಳ್ಯ ಸೇಂಟ್ ಜೋಸೆಫ್ ಸ್ಕೂಲ್ ಹಾಗೂ ಗುತ್ತಿಗಾರಿನ ಕುರಿಯಾಕೋಸ್ ಶಾಲೆಯಲ್ಲಿ ಪಡೆದಿದ್ದು, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದರು. ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ, ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಪದವಿ ಪೂರೈಸಿ, ಕ್ಯಾಂಪಸ್ ಸೆಲೆಕ್ಷನ್ ಮೂಲಕ ಇ.ವೈ ಕಂಪನಿಯ ಉದ್ಯೋಗಿಯಾಗಿದ್ದಾರೆ.
ರಾಷ್ಟ್ರೀಯ ಮಟ್ಟದ ಟಿವಿಎಸ್ ರೇಸಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಗೊಂಡಿದ್ದ ವೃಷ್ಠಿ ಈ ಅವಕಾಶ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.