ADVERTISEMENT

ಅಕ್ರಮ ವಸ್ತುಗಳ ಪಾರ್ಸೆಲ್‌ ಆರೋಪ; CBI ಅಧಿಕಾರಿಗಳ ಸೋಗಿನಲ್ಲಿ ₹68 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:04 IST
Last Updated 24 ಅಕ್ಟೋಬರ್ 2024, 6:04 IST
<div class="paragraphs"><p>ವಂಚನೆ</p></div>

ವಂಚನೆ

   

ಮಂಗಳೂರು: ಅಕ್ರಮ ವಸ್ತುಗಳನ್ನು ಪಾರ್ಸೆಲ್‌ ಮಾಡಿದ ಆರೋಪವನ್ನು ಇಲ್ಲಿನ ವ್ಯಕ್ತಿಯೊಬ್ಬರ ಮೇಲೆ ಹೊರಿಸಿ, ದೆಹಲಿ ಪೊಲೀಸರ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ₹ 68 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ನನ್ನ ಮೊಬೈಲ್‌ಗೆ ಅ.10ರಂದು  ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ನನ್ನ ಹೆಸರಿನಲ್ಲಿ ಪಾರ್ಸೆಲ್ ಇದೆ ಎಂದು ಹೇಳಿ  ಕೀಪ್ಯಾಡ್ ನಲ್ಲಿವ ಎರಡು ಅಂಕಿಗಳನ್ನು ಒತ್ತುವಂತೆ ಹೇಳಿದರು. ಆ ಕರೆಯು ಡಿಎಚ್‌ಎಲ್‌ ಗ್ರಾಹಕ ಸೇವಾ ವಿಭಾಗಕ್ಕೆ ಸಂಪರ್ಕಗೊಂಡಿತ್ತು. ಆಗ ಮಾತನಾಡಿದ ವ್ಯಕ್ತಿ, ‘ನೀವು ನಿಷೇಧಿತ ಮಾದಕ ಪದಾರ್ಥವಾದ 3.1 ಕೆ.ಜಿ ಎಂಡಿಎಂಎ ಹಾಗೂ ಬಟ್ಟೆಗಳನ್ನು  ದೆಹಲಿಯಿಂದ ಪಾರ್ಸೆಲ್‌ನಲ್ಲಿ ಕಳುಹಿಸಿದ್ದು,  ಅವುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದೆಹಲಿ ಪೊಲೀಸರಿಗೆ ಕರೆಯನ್ನು ಸಂಪರ್ಕಿಸುತ್ತೇನೆ’ ಎಂದರು.’

ADVERTISEMENT

‘ನಂತರ ವಿಡಿಯೊ ಕರೆ ಮಾಡಿದ ವ್ಯಕ್ತಿ, ನನ್ನ ಆಧಾರ್‌ ದುರುಪಯೋಗಪಡಿಸಿಕೊಂಡು ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ಕಳ್ಳಸಾಗಣೆ ಹಾಗೂ ಮಾನವ ಕಳ್ಳಸಾಗಣೆ ಕೃತ್ಯ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ನನ್ನ ವಿರುದ್ಧ ದೆಹಲಿ ಸೈಬರ್ ಕ್ರೈಂ ವಿಭಾಗದಲ್ಲಿ ಮೂರು ದೂರು ದಾಖಲಾಗಿದೆ ಎಂದು ತಿಳಿಸಿದರು. ನಂತರ ಸಿಬಿಐ ಅಧಿಕಾರಿಗೆ ಕರೆ ಸಂಪರ್ಕಿಸುವುದಾಗಿ ಹೇಳಿದರು. ಆ ಬಳಿಕ ಇನ್ನೊಬ್ಬ ವ್ಯಕ್ತಿ ಕರೆ ಮಾಡಿ ಹಣದ ವಿವರ ಕೇಳಿ ಪಡೆದರು. ತಕ್ಷಣ ₹ 24.68 ಲಕ್ಷ ಹಣ ಕಳುಹಿಸಬೇಕು. ಅದರ ನೈಜತೆ ಪರಿಶೀಲಿಸಿ 3 ಗಂಟೆಗಳಲ್ಲಿ ಮರಳಿಸುತ್ತೇವೆ ಎಂದರು. ನಂತರ ಆರ್‌ಬಿಐ ನೋಟಿಸ್ ಬಂದಿದೆ ಎಂದು ಹಣ ಕಟ್ಟಿಸಿಕೊಂಡರು. ಹೀಗೆ ಬೇರೆ ಬೇರೆ ಸಬೂಬು ಹೇಳಿ ನನ್ನಿಂದ ₹ 68 ಲಕ್ಷ ಕಟ್ಟಿಸಿಕೊಂಡು ವಂಚಿಸಿದ್ದಾರೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.