ಮೂಡುಬಿದಿರೆ: ಸಾಹಿತಿ ಹಂಪ ನಾಗರಾಜಯ್ಯ ಅವರ ದೇಸಿ ಮಹಾಕಾವ್ಯ ‘ಚಾರುವಸಂತ’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಂಗಭೂಮಿಗೆ ತರುತ್ತಿದ್ದು, ಇದೇ 29ರಂದು ಸಂಜೆ 6.15ಕ್ಕೆ ಇಲ್ಲಿನ ಸ್ಕೌಟ್ಸ್ ಗೈಡ್ ಕನ್ನಡ ಭವನದಲ್ಲಿ ಇದರ ಮೊದಲ ಪ್ರದರ್ಶನ ನಡೆಯಲಿದೆ.
ಚಾರುವಸಂತ ಕಾವ್ಯವನ್ನು ರಂಗಕರ್ಮಿ, ಸಾಹಿತಿ ನಾ. ದಾಮೋದರ ಶೆಟ್ಟಿ ಅವರು ರಂಗಕ್ಕೆ ಅಳವಡಿಸಿದ್ದಾರೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನಂತರ ಈ ತಂಡವು ಮೈಸೂರು, ಬೆಂಗಳೂರು, ತುಮಕೂರು, ದಾವಣಗೆರೆ, ಧಾರವಾಡ, ಸೇರಿದಂತೆ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಲಿದೆ.
‘ಚಾರುವಸಂತ’ ಮಹಾಕಾವ್ಯವು ಈಗಾಗಲೇ 16 ಭಾಷೆಗಳಿಗೆ ಅನುವಾದಗೊಂಡಿದೆ. ಸುಮಾರು ಎರಡೂವರೆ ಗಂಟೆಗಳಲ್ಲಿ ಈ ಮಹಾಕಾವ್ಯ ವಿಭಿನ್ನವಾಗಿ ರಂಗದ ಮೇಲೆ ತೆರೆದುಕೊಳ್ಳಲಿದೆ.
ಅ.29ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ, ಹಂಪ ನಾಗರಾಜಯ್ಯ ಅವರು ‘ಚಾರುವಸಂತ ರಂಗಪಯಣ’ವನ್ನು ಉದ್ಘಾಟಿಸುವರು. ನಾ. ದಾಮೋದರ ಶೆಟ್ಟಿ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಕುರಿಯನ್, ಪ್ರೊ. ಮಹಮ್ಮದ್ ಸದಾಕತ್ ಭಾಗವಹಿಸುವರು. ಉಚಿತ ಪ್ರವೇಶ ಇರುತ್ತದೆ ಎಂದು ಆಳ್ವಾಸ್ ಕಾಲೇಜಿನ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.