ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇದೇ 7 ಮತ್ತು 8ರಂದು ಆಳ್ವಾಸ್–ಪ್ರಗತಿ ಉದ್ಯೋಗ ಮೇಳ ನಡೆಯಲಿದೆ. ಈ ವರೆಗೆ 254 ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, 20,043 ಉದ್ಯೋಗಾವಕಾಶ ಲಭ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಯಾವುದೇ ಭಾಗದ ಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು ಅಗತ್ಯ ಇರುವವರಿಗೆ 6ರಿಂದ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹಿಂದಿನ 13 ಆವೃತ್ತಿಗಳಲ್ಲಿ ಒಟ್ಟು 31, 896 ಮಂದಿಗೆ ಉದ್ಯೋಗ ಲಭಿಸಿದೆ. ಈ ಬಾರಿ ಉದ್ಯೋಗಾರ್ಥಿಗಳಿಗೆ ಸಂದರ್ಶನ ಎದುರಿಸಲು ತರಬೇತಿ ನೀಡಲಾಗುತ್ತಿದೆ ಎಂದರು.
ಈ ಬಾರಿ ಐಟಿ ವಲಯದಲ್ಲಿ 207 ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ 20 ಕಂಪನಿಗಳಲ್ಲಿ 843 ಉದ್ಯೋಗಾವಕಾಶಗಳು ಇವೆ. ಫ್ಲಿಫ್ ಕಾರ್ಟ್ ಕಂಪನಿ ಎಂಬಿಎ ಹಾಗೂ ಬಿಇ ಪದವೀಧರರನ್ನು ನೇಮಕ ಮಾಡಿಕೊಳ್ಳಲಿದೆ. ಉತ್ಪಾದನಾ ವಲಯದಲ್ಲಿ 7000ಕ್ಕೂ ಹೆಚ್ಚು ಉದ್ಯೋಗಾವಕಾಶ ಇದೆ. ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆ ವಲಯದಲ್ಲಿ 2300 ಹುದ್ದೆಗಳು ಇದ್ದು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 400ಕ್ಕೂ ಹೆಚ್ಚು ಉದ್ಯೋಗ ಲಭ್ಯವಿದೆ ಎಂದರು.
ಐಟಿಇಎಸ್ ವಲಯದಲ್ಲಿ 4 ಸಾವಿರಕ್ಕೂ ಹೆಚ್ಚು ಹುದ್ದೆಗಳ ಪೈಕಿ 1000ಕ್ಕೂ ಅಧಿಕ ಹುದ್ದೆ ಪಿಯುಸಿ ಅಭ್ಯರ್ಥಿಗಳಿಗೆ ಸಿಗಲಿವೆ. ಫಾರ್ಮಾ ಕಂಪನಿಗಳು 700ಕ್ಕೂ ಅಧಿಕ ಉದ್ಯೋಗ ನೀಡಲಿವೆ. ಆರೋಗ್ಯ ವಲಯದ 24 ಸಂಸ್ಥೆಗಳಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗ, ಮಾರಾಟ ವಲಯದಲ್ಲಿ 3300ಕ್ಕೂ ಅಧಿಕ ಉದ್ಯೋಗ, ಮಾಧ್ಯಮಗಳಲ್ಲಿ 75ಕ್ಕೂ ಅಧಿಕ ಉದ್ಯೋಗ ಸಿಗಲಿದೆ. ನಿರ್ಮಾಣ ವಲಯದಲ್ಲಿ 300ಕ್ಕೂ ಹೆಚ್ಚು ಮಂದಿಗೆ, ಹಾಸ್ಪಿಟಾಲಿಟಿ ವಲಯದಲ್ಲಿ 295 ಹುದ್ದೆಗಳು ಇವೆ ಎಂದು ಅವರು ತಿಳಿಸಿದರು.
ನೋಂದಣಿ ಮತ್ತು ಕಂಪನಿಗಳ ಮಾಹಿತಿಗೆ www.alvaspragati.comಗೆ ಭೇಟಿ ನೀಡುವಂತೆ ಅಥವಾ 9008907716/ 9663190590/7975223865/9741440490ಗೆ ಕರೆ ಮಾಡುವಂತೆ ತಿಳಿಸಿದ ಅವರು ನೋಂದಣಿಗಾಗಿ http://alvaspragati.com/candidatesregistrationPage ಬಳಸುವಂತೆ ಸೂಚಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮತ್ತು ಆಳ್ವಾಸ್ ಪ್ರಗತಿ ಉತ್ಪಾದನಾ ವಲಯದ ಮುಖ್ಯಸ್ಥ ಕುಮಾರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.