ADVERTISEMENT

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ  

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 18:28 IST
Last Updated 6 ಜುಲೈ 2024, 18:28 IST
ಮೂಡುಬಿದಿರೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು
ಮೂಡುಬಿದಿರೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು   

ಮೂಡುಬಿದಿರೆ (ದಕ್ಷಿಣ ಕನ್ನಡ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ಸ್ವಾಯತ್ತ ಸ್ಥಾನಮಾನ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಈಗಾಗಲೇ ನ್ಯಾಕ್‌ನಲ್ಲಿ (NAAC) ಎ+ ಶ್ರೇಣಿ, ಸಿಜಿಪಿಎ 3.32 (4 ಸ್ಕೇಲ್) ಗ್ರೇಡ್ ಪಡೆದುಕೊಂಡಿದೆ. ನಿರ್ಫ್‌ (NIRF) ಇನ್ನೊವೇಷನ್ ರ್‍ಯಾಂಕಿಂಗ್‌ ಅನ್ನು 150ರಿಂದ 300 ಬ್ಯಾಂಡ್‌ನಲ್ಲಿ ಪಡೆದಿದೆ. ಕಾಲೇಜಿನ ಹಲವು ಎಂಜಿನಿಯರಿಂಗ್‌ ವಿಭಾಗಗಳು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿವೆ ಎಂದರು.

ಇಸ್ರೊ ಹಾಗೂ ಇಸ್ರೊದ ಸಹ ಸಂಸ್ಥೆಗಳಾದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಹೈದರಾಬಾದ್, ಪ್ರಾದೇಶಿಕ ದೂರ ಸಂವೇದಿ ಕೇಂದ್ರ ಬೆಂಗಳೂರು, ರಾಷ್ಟ್ರೀಯ ವಾಯುಮಂಡಲ ಸಂಶೋಧನಾ ಪ್ರಯೋಗಾಲಯಗಳು ಗಡಂಕಿ, ಎಸ್ಸಿಎಲ್, ಬಾಹ್ಯಾಕಾಶ ವಿಭಾಗ ಚಂಡೀಗಢ, ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ ಪುಣೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಾದ ಕುಮಾಮೊಟೊ ವಿಶ್ವವಿದ್ಯಾಲಯ ಜಪಾನ್, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅಲಹಾಬಾದ್ ಹಾಗೂ ಏಳು ಐರೋಪ್ಯ ವಿಶ್ವವಿದ್ಯಾಲಯಗಳ ಜೊತೆ ಆಳ್ವಾಸ್ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.

ADVERTISEMENT

ಆಳ್ವಾಸ್ ಶಿಕ್ಷಣ ಸಂಸ್ಥೆಯು 2024ರಲ್ಲಿ 15 ಪೇಟೆಂಟ್‌ಗಳನ್ನು ಪ್ರಕಟಗೊಳಿಸಿದ್ದು, ಜೊತೆಯಲ್ಲಿ 8 ಪೇಟೆಂಟ್‌ಗಳ ಮಾನ್ಯತೆ ಗಳಿಸಿದೆ. 2023-24ನೇ ಸಾಲಿನಲ್ಲಿ ಸರ್ಕಾರಿ ಸಂಶೋಧನಾ ಕೇಂದ್ರಗಳಿಂದ ₹1.25 ಕೋಟಿ ಅನುದಾನ ಪಡೆದಿರುವುದು ಸಂಸ್ಥೆಯು ಆವಿಷ್ಕಾರ ಹಾಗೂ ತಂತ್ರಜ್ಞಾನದ ಉನ್ನತೀಕರಣದಲ್ಲಿ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಆಳ್ವಾಸ್‌ನಲ್ಲಿ ಜರುಗುವ ಆನ್ ಕ್ಯಾಂಪಸ್, ಆಫ್ ಕ್ಯಾಂಪಸ್, ಪೂಲ್ ಕ್ಯಾಂಪಸ್ ಹಾಗೂ ಪ್ರಗತಿ- ಉದ್ಯೋಗ ಮೇಳಗಳು ಉದ್ಯೋಗಾವಕಾಶ ಕಲ್ಪಿಸಿವೆ. ‘ಸ್ವಾಯತ್ತ’ದಿಂದ ಪ್ರಮುಖವಾಗಿ ‘ಪಠ್ಯಕ್ರಮ ನಮ್ಯತೆ’, ನವೀನ ಬೋಧನಾ ಕ್ರಮ ಅಳವಡಿಕೆ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ, ಉದ್ಯಮಶೀಲತಾ ಬೆಳವಣಿಗೆ, ಜಾಗತಿಕ ಮಾನ್ಯತೆಗೆ ನೆರವು ದೊರೆಯಲಿದೆ ಎಂದು ಹೇಳಿದರು.

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಪೀಟರ್ ಫರ್ನಾಂಡೀಸ್, ಅಕಾಡೆಮಿಕ್ಸ್ ಡೀನ್ ದಿವಾಕರ ಶೆಟ್ಟಿ, ರಿಸರ್ಚ್‌ ಡೀನ್ ರಿಚರ್ಡ್ ಪಿಂಟೊ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.