ADVERTISEMENT

ಮಂಗಳೂರು: ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ ಜೂ.7ರಿಂದ

200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 14:07 IST
Last Updated 11 ಮೇ 2024, 14:07 IST
‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳದ ಕುರಿತು ವಿವೇಕ್ ಆಳ್ವ ಮಾಹಿತಿ ನೀಡಿದರು. ಸುಶಾಂತ್ ಅನಿಲ್ ಲೋಬೊ, ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು
‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳದ ಕುರಿತು ವಿವೇಕ್ ಆಳ್ವ ಮಾಹಿತಿ ನೀಡಿದರು. ಸುಶಾಂತ್ ಅನಿಲ್ ಲೋಬೊ, ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು   

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ 14ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಜೂನ್ 7 ಮತ್ತು 8 ರಂದು ಮೂಡುಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ‘ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ,  ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೊಮೊಬೈಲ್, ಹಾಸ್ಪಿಟಾಲಿಟಿ, ಮಾಧ್ಯಮ, ಶಿಕ್ಷಣ ಮತ್ತು ಎನ್‍ಜಿಒಗಳನ್ನು ಪ್ರತಿನಿಧಿಸುವ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ’ ಎಂದರು.

ಹೈದರಾಬಾದ್‌ನ ಫ್ಯಾಕ್ಟ್‌ಸೆಟ್‌ ಸಂಸ್ಥೆ, ಇಎಕ್ಸ್‌ಎಲ್, ಮಹೀಂದ್ರಾ ಫಿನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಕಿರ್ಲೋಸ್ಕರ್‌ ಟೊಯೊಟಾ ಟೆಕ್ಸ್‌ಟೈಲ್ ಮೆಷಿನರಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಆಜಾಕ್ಸ್‌ ಎಂಜಿನಿಯರಿಂಗ್, ಬುಹ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎರೊಸ್ಪೇಸ್ ಡಿವಿಷನ್, ವೋಲ್ವೊ ಗ್ರೂಪ್ ಸೇರಿದಂತೆ 60ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಿದ್ದು, 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ADVERTISEMENT

ಪದವಿ, ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‍ಮೆಂಟ್, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಪಿಯುಸಿ ಉತ್ತೀರ್ಣರಾಗಿರುವ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದು. ಸಂಸ್ಥೆಯು ಈ ವರೆಗೆ 20 ಉದ್ಯೋಗ ಮೇಳಗಳನ್ನು ಆಯೋಜಿಸಿದ್ದು, ಇದಕ್ಕಾಗಿ ₹5 ಕೋಟಿ ವೆಚ್ಚ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ, ವಿವಿಧ ರಾಜ್ಯಗಳ ಅಭ್ಯರ್ಥಿಗಳು ಮೇಳದಲ್ಲಿ ಉದ್ಯೋಗ ಪಡೆದಿದ್ದಾರೆ. ಈವರೆಗೆ 31,896 ಜನರಿಗೆ ಉದ್ಯೋಗ ದೊರೆತಿದೆ ಎಂದು ವಿವೇಕ್ ಆಳ್ವ ಹೇಳಿದರು.

ಹೊರ ಜಿಲ್ಲೆಗಳಿಂದ ಬರುವವರಿಗೆ ಜೂನ್ 6ರಂದು ವಸತಿ ವ್ಯವಸ್ಥೆ, ಐಟಿಐ ಅಭ್ಯರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗುವುದು. ಮಾಹಿತಿಗೆ ಮೊ. 9008907716, 9663190590, 7975223865, 9741440490  ಕರೆ ಮಾಡಬಹುದು.

ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಇದ್ದರು.

‘ನೋಂದಣಿ ಕಡ್ಡಾಯ’: ಉದ್ಯೋಗ ಮಾಹಿತಿಗೆ ಸಂಬಂಧಿಸಿದ ಮಾಹಿತಿಯನ್ನು www.alvaspragati.com ಇಲ್ಲಿ ಪ್ರಕಟಿಸಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ವಿವೇಕ್ ಆಳ್ವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.