ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 12ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳಕ್ಕೆ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿ ಉದ್ಯೋಗ ಅರಿಸಲು ಮುಂದಾಗುತ್ತಾರೆ. ಅಂತಹವರಿಗೆ ನೆರವಾಗುವುದೇ ಆಳ್ವಾಸ್ ಪ್ರಗತಿಯ ಉದ್ದೇಶ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸವಕಲು ನಾಣ್ಯಗಳಾಗದೇ, ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು. ಆಗ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದೂ ಸುಲಭವಾಗುತ್ತದೆ. ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗ ಲಭಿಸಿ, ಆ ಸಂಪತ್ತಿನ ಒಂದಷ್ಟು ಭಾಗವನ್ನು ಸಮಾಜಕ್ಕೆ ಅರ್ಪಿಸುವಂತಾಗಬೇಕು ಎಂದರು.
ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಸರ್ಕಾರಿ ಮತ್ತು 17 ಲಕ್ಷಕ್ಕೂ ಅಧಿಕ ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಇದ್ದರೂ, ಅವುಗಳ ಬಗೆಗಿನ ಸರಿಯಾದ ತಿಳಿವಳಿಕೆ ಮತ್ತು ಉದ್ಯೋಗ ಪಡೆಯಲು ಬೇಕಾದ ತಯಾರಿ ಇಲ್ಲದ ಕಾರಣ ಹಾಗೂ ಕೌಶಲ ಕೊರತೆಯಿಂದ ಯುವಜನತೆ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಕೇವಲ ಶೇ 5 ಜನರು ಮಾತ್ರವೆ ಸ್ವ ಉದ್ಯಮದಲ್ಲಿ ತೊಡಗುತ್ತಾರೆ ಎಂದರು.
ದೇಶದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಾಕಷ್ಟು ಅವಕಾಶಗಳಿದ್ದರೂ, ಕೆಲಸ ಹುಡುಕುವ ಹಾಗೂ ಸಂದರ್ಶನಗಳನ್ನು ಎದುರಿಸುವ ಛಲ ಹೆಚ್ಚಾಗಬೇಕಾಗಿದೆ. ಆಳ್ವಾಸ್ ಪ್ರಗತಿಯಂತಹ ಉದ್ಯೋಗ ಮೇಳ ಏಕಕಾಲಕ್ಕೆ ನೂರಾರು ಕಂಪನಿಗಳನ್ನು ಒಂದೇ ಕಡೆ ಸೇರಿಸಿ, ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿಯ ಆಳ್ವಾಸ್ ಪ್ರಗತಿಯಲ್ಲಿ 12 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅವಕಾಶವಿದ್ದು, ಮ್ಯಾನುಫ್ಯಾಕ್ಚರಿಂಗ್, ಐಟಿ-ಐಟಿಇಎಸ್, ಸೇಲ್ಸ್, ರಿಟೇಲ್ ಬ್ಯಾಂಕಿಂಗ್ ಮತ್ತು ಹಣಕಾಸು, ಆರೋಗ್ಯ, ಟೆಲಿಕಾಂ, ಮಾಧ್ಯಮ ಮತ್ತು ಶಿಕ್ಷಣ ಅಲ್ಲದೇ ಎನ್‌ಜಿಓಗಳನ್ನು ಪ್ರತಿನಿಧಿಸುವ 200ಕ್ಕೂ ಅಧಿಕ ಉನ್ನತ ಕಂಪನಿಗಳು ನೇಮಕಾತಿ ನಡೆಸಲಿವೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ‘ಆಳ್ವಾಸ್‌ನಂತಹ ವಿದ್ಯಾಸಂಸ್ಥೆ ನನ್ನ ಕ್ಷೇತ್ರದಲ್ಲಿ ಇರುವುದೇ ಹೆಮ್ಮೆಯ ಸಂಗತಿ. ಆಳ್ವಾಸ್ ಪ್ರಗತಿ ಉದ್ಯೋಗ ಮೇಳವು ನೂರಾರು ಕಂಪನಿಗಳನ್ನು ಒಂದೇ ಸೂರಿನಡಿ ತಂದು, ವಿವಿಧ ಕಾಲೇಜುಗಳಲ್ಲಿ ಪದವಿ ಪೂರೈಸಿ ಉದ್ಯೋಗ ಹುಡುಕಾಟದಲ್ಲಿರುವವರಿಗೆ ಅವಕಾಶ ಮಾಡಿಕೊಟ್ಟಿದೆ. ಒಬ್ಬರಿಗೆ ಉದ್ಯೋಗ ದೊರಕಿಸಿ ಕೊಡುವುದು ಎಂದರೆ ಒಂದು ಮನೆಗೆ ಅನ್ನ ಕೊಟ್ಟ ತೃಪ್ತಿ ಸಿಗಲಿದೆ’ ಎಂದರು.
ಯಶಸ್ವಿ ಉದ್ಯಮಿಗಳಾದ ಎಕ್ಸ್ಪರ್ಟೈಸ್ ಕಂಪನಿ ಸಿಇಒ ಮೊಹಮ್ಮದ್ ಅಶ್ರಫ್, ಇಂಡೊ ಮಿಮ್‌ನ ಪ್ರಧಾನ ಎಚ್‌ಆರ್ ವೆಂಕಟರಮಣ ಪಿ ಹಾಗೂ ಮಶ್ರೆಕ್ ಗ್ಲೋಬಲ್ ನೆಟ್ವರ್ಕ್ ಸಂಸ್ಥೆಯ ಗ್ರೂಪ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಜಯರಾಮ್ ಅವರನ್ನು ಸನ್ಮಾನಿಸಲಾಯಿತು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೊದಲ ದಿನದ ವಿಶೇಷ
ಅಮೇಜಾನ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್, ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ, ಇಎಕ್ಸ್ಎಲ್ ಸರ್ವೀಸಸ್, ನೆಟ್‌ಮೆಡ್ಸ್ , ನಾರಾಯಣ ಹೃದಯಾಲಯ, ಫೋರ್ಟಿಸ್ ಹಾಸ್ಪಿಟಲ್, ಎಕ್ಸಪರ್ಟೈಸ್ ಕಂಪನಿಗಳು ಮೊದಲ ದಿನ ಸಂದರ್ಶನ ನಡೆಸಿದವು.
ಆಳ್ವಾಸ್ ಪ್ರಗತಿ-22 ವಿಶೇಷತೆಗಳು
* ಆಳ್ವಾಸ್ ಪ್ರಗತಿಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ವಿವಿಧ ವಿಧ್ಯಾಭ್ಯಾಸಗಳಿಗೆ ಅನುಗುಣವಾಗಿ ಕಲರ್ ಕೋಡಿಂಗ್ ವ್ಯವಸ್ಥೆಯಿದ್ದು, ಸಂಪೂರ್ಣ ಉದ್ಯೋಗ ಮಾಹಿತಿಯನ್ನೊಳಗೊಂಡ ಮಾಹಿತಿ ಕೈಪಿಡಿಯನ್ನು ಪ್ರತಿ ನೋಂದಾಯಿತ ಅಭ್ಯರ್ಥಿಗೆ ನೀಡಲಾಗುತ್ತಿದೆ. ಉದ್ಯೋಗ ಮಾಹಿತಿ ಕೇಂದ್ರದಲ್ಲಿ ಆಯಾ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ.
*800 ಸ್ವಯಂ ಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ.
* ಈ ಬಾರಿ ಮ್ಯಾನುಫೆಕ್ಚರಿಂಗ್ ವಲಯದಲ್ಲಿ ಮೆಕ್ಯಾನಿಕಲ್ ವಿಭಾಗಕ್ಕೆ ಹೆಚ್ಚಿನ ಅವಕಾಶಗಳಿದ್ದು, ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
*ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಿಎಸ್‌ಆರ್ ಚಟುವಟಿಕೆಯಾಗಿ ಆಳ್ವಾಸ್ ಪ್ರಗತಿಯನ್ನು ನಡೆಸಲಾಗುತ್ತಿದ್ದು, ಸಾಮಾಜಿಕ ಸೇವಾ ಮನೋಭಾವದಿಂದ ಉದ್ಯೋಗ ಮೇಳದ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತಿದೆ
*ಈ ಮೇಳದಲ್ಲಿ ದೇಶದ ಅರ್ಹ ಅಭ್ಯರ್ಥಿಗಳಿಗೆ ಭಾಗವಹಿಸುವ ಮುಕ್ತ ಅವಕಾಶವಿದೆ.
* ಇದುವರೆಗೆ ಆಳ್ವಾಸ್ ಸಹಭಾಗಿತ್ವದ ಉದ್ಯೋಗ ಮೇಳಗಳಲ್ಲಿ ಹಾಗೂ ಆಳ್ವಾಸ್ ಪ್ರಗತಿಯಲ್ಲಿ 25 ಲಕ್ಷದಷ್ಟು ಅಭ್ಯರ್ಥಿಗಳು ಪಾಲ್ಗೊಂಡಿದ್ದು, 75 ಸಾವಿರಕ್ಕೂ ಅಧಿಕ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ಲಭಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಆಳ್ವಾಸ್ ಪ್ರಗತಿಯ ಇನ್ನೊಂದು ವಿಶೇಷತೆಯೆಂದರೆ ಇಲ್ಲಿ ಯಾವುದೇ ಕನ್ಸಲ್ಟೆನ್ಸಿ ಕಂಪನಿಗಳಿಗೆ ಅವಕಾಶವಿಲ್ಲ. ಬದಲಾಗಿ ಪ್ರತಿಷ್ಠಿತ ಉನ್ನತ ಕಂಪೆನಿಗಳು ಮಾತ್ರವೇ ನೇಮಕಾತಿ ಮಾಡಲಿವೆ.
ಅಂಕಿ ಅಂಶ
8248 ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ ಅಭ್ಯರ್ಥಿಗಳು
792 ಸ್ಥಳದಲ್ಲೇ ಆದ ನೋಂದಣಿ
216 ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪನಿಗಳು
5818 ಮೊದಲ ದಿನ ಆಗಮಿಸಿದ ಉದ್ಯೋಗಕಾಂಕ್ಷಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.