ADVERTISEMENT

ಆಳ್ವಾಸ್‌ ಕಾಲೇಜಿನಲ್ಲಿ ‘ಸಮೃದ್ಧಿ’ ಮಹಾಮೇಳ 14ರಿಂದ

ವೈವಿಧ್ಯಮಯ ಹಣ್ಣು, ಕೃಷಿ ಪರಿಕರ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ, ಆಹಾರೋತ್ಸವ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:52 IST
Last Updated 12 ಜೂನ್ 2024, 6:52 IST
ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಮೋಹನ ಆಳ್ವ ಮಾತನಾಡಿದರು. ದೀಪಕ್‌ ಕೊಳಕೆ,  ಡಾ.ಶಶಿಕುಮಾರ, ಪ್ರಸಾದ ಶೆಟ್ಟಿ ಹಾಗೂ ರಾಜವರ್ಮ ಬೈಲಂಗಡಿ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಮೋಹನ ಆಳ್ವ ಮಾತನಾಡಿದರು. ದೀಪಕ್‌ ಕೊಳಕೆ,  ಡಾ.ಶಶಿಕುಮಾರ, ಪ್ರಸಾದ ಶೆಟ್ಟಿ ಹಾಗೂ ರಾಜವರ್ಮ ಬೈಲಂಗಡಿ ಭಾಗವಹಿಸಿದ್ದರು   

ಮಂಗಳೂರು: ಮಿಜಾರುಗುತ್ತು ಆನಂದ ಆಳ್ವ ಅವರ ಸ್ಮರಣಾರ್ಥ  ಹಲಸು ಸಹಿತ ವೈವಿಧ್ಯಮಯ ಹಣ್ಣುಗಳ ಆಹಾರೋತ್ಸವ, ಕೃಷಿ ಪರಿಕರ ಹಾಗೂ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಒಳಗೊಂಡ ‘ಸಮೃದ್ಧಿ’ ಮಹಾಮೇಳ  ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಇದೇ 14ರಿಂದ 16ರವರೆಗೆ  ಏರ್ಪಡಿಸಲಾಗಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಅವರು, ‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಹಾರೋತ್ಸವ ಮಹಾಮೇಳ ಸಮಿತಿ, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕೃಷಿ ಎಂಜಿನಿಯರಿಂಗ್ ವಿಭಾಗ ಹಾಗೂ ವಿವಿಧ ಸಂಘ ಸಂಸ್ಥೆಗಳ  ಆಶ್ರಯದಲ್ಲಿ ಹಮ್ಮಿಕೊಂಡ ಎರಡನೇ ವರ್ಷದ ಈ ಮಹಾಮೇಳದಲ್ಲಿ ಆಸಕ್ತರಿಗೆ ಉಚಿತ ಪ್ರವೇಶ ಇರಲಿದೆ’ ಎಂದರು.

‘ಸಂಸದ ಕ್ಯಾ.ಬ್ರಿಜೇಶ್ ಚೌಟ ಇದೇ 14ರಂದು ಬೆಳಿಗ್ಗೆ 10ಕ್ಕೆ ಮೇಳವನ್ನು ಉದ್ಘಾಟಿಸುವರು. ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.  ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿಕ ಮುಳಿಯ ವೆಂಕಟಕೃಷ್ಣ ಶರ್ಮ ಮುನ್ನೋಟದ ಮಾತುಗಳನ್ನಾಡಲಿದ್ದಾರೆ’ ಎಂದರು.

ADVERTISEMENT

‘ಬಂಗಾಲಿ, ಒಡಿಶಾ, ಆಂಧ್ರ, ಜಮ್ಮು, ಲಖನೌ, ಬಗಲ್‌ಪುರ, ಜೈಪುರ, ಗುಜರಾತ್, ಪಂಜಾಬ್, ರಾಜಸ್ಥಾನ, ಸೂರತ್ ಹಾಗೂ ಬಿಹಾರ್ ರಾಜ್ಯಗಳ ಕೈಮಗ್ಗದ ಉಡುಪು, ಹತ್ತಿ, ರೇಷ್ಮೆ ಸೀರೆಗಳು, ಸಿದ್ಧ ಉಡುಪು, ಒಡಿಶಾ ಹಾಗೂ ಜೈಪುರದ ಬುಡಕಟ್ಟು ಜನಾಂಗಗಳ ಆಭರಣಗಳು, ಕೈಯಿಂದ ತಯಾರಿಸಿದ ಬಳೆಗಳು, ಹಿತ್ತಾಳೆ ಕಲಾಕೃತಿಗಳು, ಮರದ ಚೌಕಟ್ಟಿನ ಹಿತ್ತಾಳೆ ಕಲಾಕೃತಿಗಳು, ಸಮುದ್ರಚಿಪ್ಪಿನ ಆಭರಣಗಳು, ಕೈಯಿಂದ ತಯಾರಿಸಿದ ಮರದ ಕರಕುಶಲ ವಸ್ತುಗಳು, ಮರದ ಆಟಿಕೆಗಳು, ಚನ್ನಪಟ್ಟಣದ ಆಟಿಕೆಗಳು, ಅಮೃತಶಿಲೆಯ ವಸ್ತುಗಳು, ಬಿದಿರಿನ ಕೈ ಚೀಲಗಳ ಉತ್ತರ ಭಾರತದ ಮಳಿಗೆಗಳು ವಿಶೇಷ ಆಕರ್ಷಣೆಯಾಗಿರಲಿವೆ. ವಿವಿಧ ಬಗೆಯ  ಹಲಸು, ಮಾವು, ಪಪ್ಪಾಯ, ಅನಾನಸು, ಪೇರಳೆ, ಕಲ್ಲಂಗಡಿ, ನೇರಳೆ, ರಂಬುಟನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ ಫ್ರೂಟ್, ಬಟರ್ ಫ್ರೂಟ್‌ನಂತಹ  ಹಣ್ಣಿನ ತಳಿಗಳ ಸಂಗ್ರಹವಿರಲಿದೆ. ಕಲ್ಲಂಗಡಿ, ಕಬ್ಬು, ತಾಜಾ ಹಣ್ಣುಗಳ ಸವಿರಸ, ಹಣ್ಣು-ತರಕಾರಿಗಳಿಂದ ತಯಾರಾದ ತಿನಿಸುಗಳನ್ನು ಸವಿಯಬಹುದು’ ಎಂದು ತಿಳಿಸಿದರು.  
 
‘ಕೃಷಿ ಯಂತ್ರೋಪಕರಣಗಳು, ಫಲ ಪುಷ್ಪಗಳ ಸಸ್ಯಗಳು, ಬಿತ್ತನೆ ಬೀಜಗಳು  ನವವಿಧ ಸಿರಿಧಾನ್ಯಗಳ ಸಂಗ್ರಹ ಇರಲಿವೆ. ಆಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆಗಳು, ಗೃಹೋಪಯೋಗಿ ವಸ್ತುಗಳ ಬೃಹತ್ ಮೇಳ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಆಹಾರ ಮತ್ತು ಪೋಷಕಾಂಶಗಳ ಪ್ರಾತ್ಯಕ್ಷಿಕೆ ನಡೆಯಲಿದೆ.  ‘ಸಿರಿ’ ಸ್ವದೇಶಿ ಉತ್ಪನ್ನಗಳ  ಸಂಗ್ರಹ ಇರಲಿದೆ’ ಎಂದರು. 

‘ಸಮೃದ್ಧಿ’ ಮಹಾಮೇಳ ಸಮಿತಿಯ ಸಂಯೋಜಕ ಡಾ ಶಶಿಕುಮಾರ, ಸದಸ್ಯರಾದ ರಾಜವರ್ಮ ಬೈಲಂಗಡಿ, ಪ್ರಸಾದ ಶೆಟ್ಟಿ ಹಾಗೂ ದೀಪಕ ಕೊಳಕೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. 

ರೀಲ್ಸ್ ಸ್ಪರ್ಧೆ– ಬಹುಮಾನ ‘

ಮಹಾಮೇಳದ ಮೊದಲ ದಿನ  ಆಕರ್ಷಕ ಹಾಗೂ ಗುಣಾತ್ಮಕ ರೀಲ್ಸ್‌ ತಯಾರಿಸಿ ಇನ್‌ಸ್ಟಾಗ್ರಾಂ ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದ ತಮ್ಮ ಖಾತೆಗಳಲ್ಲಿ ಪ್ರಸಾರ ಮಾಡಬಹುದು. ಹೆಚ್ಚು ವೀಕ್ಷಣೆಗೊಳಪಡುವ ಪರಿಣಾಮಕಾರಿ ರೀಲ್ಸ್‌ಗಳಿಗೆ  ₹ 10ಸಾವಿರ ಪ್ರಥಮ ಬಹುಮಾನ ₹ 5 ಸಾವಿರ ದ್ವಿತೀಯ ನೀಡಲಾಗುವುದು. ಆಸಕ್ತರು ವಿವರಗಳಿಗೆ ಮೊಬೈಲ್ ಸಂಖ್ಯೆ 9164322329 ಅನ್ನು ಸಂಪರ್ಕಿಸಬಹುದು‘ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.