ADVERTISEMENT

ಅಂಗನವಾಡಿ ಸಮಸ್ಯೆಗಳು ಹಲವಾರು: ಕಾರ್ಯಕರ್ತೆಯರಿಗೆ ಕಾರ್ಯಭಾರದ ‘ಹೊರೆ’

ಸಂಧ್ಯಾ ಹೆಗಡೆ
Published 28 ಅಕ್ಟೋಬರ್ 2024, 6:05 IST
Last Updated 28 ಅಕ್ಟೋಬರ್ 2024, 6:05 IST
ಮಳೆಗಾಲದ ವೇಳೆ ಬಂದ್ ಮಾಡಿದ್ದ ಪುತ್ತೂರು ತಾಲ್ಲೂಕಿನ ಪೆರ್ನಾಜೆಯ ಅಂಗನವಾಡಿ ಕೇಂದ್ರ
ಮಳೆಗಾಲದ ವೇಳೆ ಬಂದ್ ಮಾಡಿದ್ದ ಪುತ್ತೂರು ತಾಲ್ಲೂಕಿನ ಪೆರ್ನಾಜೆಯ ಅಂಗನವಾಡಿ ಕೇಂದ್ರ   

ಮಂಗಳೂರು: ಮಕ್ಕಳು ಪರಸ್ಪರ ಬೆರೆಯುವ, ಇತರ ಮಕ್ಕಳೊಡನೆ ಒಡನಾಡುವ, ಶಾಲಾ ಶಿಕ್ಷಣ ವ್ಯವಸ್ಥೆಗೆ ಪುಟಾಣಿಗಳನ್ನು ಅಣಿಗೊಳಿಸುವ ಕೇಂದ್ರ ಅಂಗನವಾಡಿಗಳು. ಶಾಲಾ ಪೂರ್ವ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪಾತ್ರ ಮಹತ್ವದ್ದು. ಪುಟ್ಟ ಕಂದಮ್ಮಗಳನ್ನು ತಮ್ಮದೇ ಮಕ್ಕಳಂತೆ ಸಲಹುವ ಅಂಗನವಾಡಿ ಕಾರ್ಯಕರ್ತೆಯರ ನೋವು ಸೆರಗಿನೊಳಗೆ ಬಚ್ಚಿಟ್ಟ ಕೆಂಡದಂತೆ.

ಸರ್ಕಾರದ ಹೊಸ ಕಾರ್ಯಕ್ರಮಗಳು, ಬದಲಾಗುವ ಆಹಾರ ಮೆನು, ವಿವಿಧ ಇಲಾಖೆಗಳ ಹೆಚ್ಚುವರಿ ಕಾರ್ಯಭಾರಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ‘ಗೌರವ ಧನ’ದ ಅಡಿಯಲ್ಲಿ ಕೆಲಸ ಮಾಡುವ ನಮ್ಮ ಪರಿಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯಲ್ಲಿ ಒಟ್ಟು 2,131 ಅಂಗನವಾಡಿಗಳು ಇವೆ. ಮಂಜೂರು ಇರುವ 2,130 ಕಾರ್ಯಕರ್ತೆಯರ ಹುದ್ದೆಗಳಲ್ಲಿ 59 ಹುದ್ದೆಗಳು ಖಾಲಿ ಇದ್ದರೆ, ಸಹಾಯಕಿಯರ 2,125 ಹುದ್ದೆಗಳಲ್ಲಿ 180 ಹುದ್ದೆಗಳು ಖಾಲಿ ಇವೆ. 164 ಅಂಗನವಾಡಿಗಳಿಗೆ ನಿವೇಶನದ ಲಭ್ಯತೆ ಇಲ್ಲ. 56 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ನಗರ ಪ್ರದೇಶದಲ್ಲಿರುವ ಒಂದಷ್ಟು ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಇದ್ದರೂ, ಕೊಠಡಿ ಕಿರಿದಾಗಿದೆ. ಚರಂಡಿ, ಕಸದ ತೊಟ್ಟಿ ಸನಿಹದಲ್ಲಿರುವ ಅಂಗನವಾಡಿಗಳಿಗೆ ನಿತ್ಯ ನಿರಂತರ ಅಸಹ್ಯ ವಾಸನೆ ತಪ್ಪಿದ್ದಲ್ಲ. ರಸ್ತೆ ವಿಸ್ತರಣೆ ವೇಳೆ ಕಟ್ಟಡ ಕಳೆದುಕೊಳ್ಳುವ ಆತಂಕದಲ್ಲೂ ಕೆಲವು ಅಂಗನವಾಡಿಗಳು ಇವೆ.

ADVERTISEMENT

‘ಮೊಟ್ಟೆ ಪೂರೈಕೆ ತೀರದ ಸಮಸ್ಯೆ. ಈ ಹಿಂದೆ ಟೆಂಡರ್ ಮೂಲಕ ಗುತ್ತಿಗೆ ಪಡೆದ ಕಂಪನಿ ಮೊಟ್ಟೆ ಪೂರೈಕೆ ಮಾಡುತ್ತಿತ್ತು. ಆಗ, ಕಳಪೆ ಗುಣಮಟ್ಟ, ಕೊಳೆತ ಮೊಟ್ಟೆಗಳ ಬಗ್ಗೆ ಗರ್ಭಿಣಿ, ಬಾಣಂತಿಯರ ಬೈಗುಳ ಕೇಳಿಸಿಕೊಳ್ಳಬೇಕಾಗುತ್ತಿತ್ತು. ಈಗ ಅಂಗವಾಡಿಗಳಿಗೆ ನೇರವಾಗಿ ಹಣ ಪಾವತಿಯಾಗುತ್ತಿದೆ. ಒಂದು ಮೊಟ್ಟೆಗೆ ಸರ್ಕಾರ ₹6 ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಏರಿಳಿತ ವಾಗುತ್ತದೆ. ಪ್ರಸ್ತುತ ಒಂದು ಮೊಟ್ಟೆಗೆ ₹6.30ರಿಂದ ₹7 ದರ ಇದ್ದು, ಹೆಚ್ಚುವರಿ ಮೊತ್ತವನ್ನು ಅಂಗನವಾಡಿ ಕಾರ್ಯಕರ್ತೆಯರು ಸ್ವತಃ ಭರಿಸುತ್ತಾರೆ’ ಎನ್ನುತ್ತಾರೆ ಕಾರ್ಯಕರ್ತೆಯೊಬ್ಬರು.

‘ಸರ್ಕಾರದ ನಿಯಮದಂತೆ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಬರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಂಗಳಿಗೆ 25 ಮೊಟ್ಟೆ ಹಾಗೂ ಅಂಗನವಾಡಿ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡಬೇಕು. ಮೊಟ್ಟೆಯ ದರ ಜಾಸ್ತಿಯಾದರೆ, ಅದರ ಭಾರ ನಮಗೆ. ಮಾರುಕಟ್ಟೆ ದರ ಆಧರಿಸಿ, ಮೊಟ್ಟೆಗೆ ಖರೀದಿಗೆ ನೀಡುವ ಹಣವನ್ನು ಸರ್ಕಾರ ಪಾವತಿಸಬೇಕು ಎಂಬುದು ನಮ್ಮ ಬಹುದಿನಗಳ ಬೇಡಿಕೆ’ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ (ಸ್ವತಂತ್ರ ಸಂಘಟನೆ) ರಾಜ್ಯ ಗೌರವಾಧ್ಯಕ್ಷೆ ಜಯಲಕ್ಷ್ಮಿ.

‘ಆರೋಗ್ಯ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳ ಕಾರ್ಯಭಾರವನ್ನು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಾರೆ. ಬೆಳಿಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ತಮ್ಮ ಕಂದಮ್ಮಗಳ ಕಾಳಜಿಯನ್ನು ನಮಗೆ ವಹಿಸಿ ತಾಯಂದಿರು ಕೆಲಸಕ್ಕೆ ಹೋಗುತ್ತಾರೆ. ಮಕ್ಕಳಿಗೆ ನಿರ್ದಿಷ್ಟ ಸಮಯಕ್ಕೆ ಆಹಾರ, ಮಧ್ಯಾಹ್ನದ ಊಟ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ. ಆದರೆ, ಹೆಚ್ಚುವರಿ ಕೆಲಸಗಳಿದ್ದಾಗ, ಕೇಂದ್ರಕ್ಕೆ ಬೇರೆ ಇಲಾಖೆಗಳ ಅಧಿಕಾರಿಗಳ ಭೇಟಿ ಇದ್ದಂತಹ ಅನಿವಾರ್ಯ ಸಂದರ್ಭಗಳಲ್ಲೂ ದೈನಂದಿನ ಕಾರ್ಯದಲ್ಲಿ ವಿನಾಯಿತಿ ಇರುವುದಿಲ್ಲ. 21 ಬೇರೆ ಬೇರೆ ನೋಂದಣಿ ಪುಸ್ತಕಗಳಲ್ಲಿ ದಾಖಲಾತಿ ಮಾಡುವ ಹೊಣೆ ನಮ್ಮ ಕರ್ತವ್ಯದ ಭಾಗವಾಗಿದೆ. ಕೆಲವು ಅಂಗನವಾಡಿಗಳಲ್ಲಿ ಸಹಾಯಕರೂ ಇಲ್ಲ. ಇಂತಹ ಕಷ್ಟಗಳನ್ನು ಎಲ್ಲಿಯೂ ಹೊರಗಿಕ್ಕಲಾಗದ ಪರಿಸ್ಥಿತಿ ನಮ್ಮದು’ ಎಂದು ಪುತ್ತೂರಿನ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಲವತ್ತುಕೊಂಡರು.

‘ಪೋಷಣ್’ ದೊಡ್ಡ ಹೊರೆ: ಅಪೌಷ್ಟಿಕತೆ ತಡೆಗಟ್ಟುವ ಉದ್ದೇಶದಿಂದ ನಡೆಸುವ ಪೋಷಣ್ ಮಾಸಾಚರಣೆಗೆ ಒಂದೆರಡು ವರ್ಷಗಳಿಂದ ಅನುದಾನ ಬರುವುದು ನಿಂತಿದೆ. ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಆಗಿದ್ದರೂ, ಬಿಡಿಗಾಸೂ ಇಲ್ಲದೆ ಕಾರ್ಯಕ್ರಮ ನಡೆಸುವುದು ಸುಲಭವಲ್ಲ. ಹಲವಾರು ಕಡೆ ಬ್ಯಾನರ್ ವೆಚ್ಚವನ್ನೂ ಕಾರ್ಯಕರ್ತೆಯರೇ ಭರಿಸುತ್ತಾರೆ. ಸಮುದಾಯ ಸಹಭಾಗಿತ್ವದಲ್ಲಿ ನಡೆಸಬೇಕೆನ್ನುವ ಪರಿಕಲ್ಪನೆ ಒಳ್ಳೆಯದೇ, ಆದರೆ, ಸಹಕಾರ ಸಿಗುವುದು ಕೆಲವೆಡೆಗಳಲ್ಲಿ ಮಾತ್ರ ಎಂದು ಸಂಘಟನೆಯ ಪದಾಧಿಕಾರಿಯೊಬ್ಬರು ಬೇಸರಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಗೌರವಧನ ದೊರೆತರೆ ಅನುಕೂಲ. ಬೆಲೆ ಏರಿಕೆಯ ಕಾಲದಲ್ಲಿ ಈಗಿನ ಗೌರವಧನದಲ್ಲಿ ಜೀವನ ನಡೆಸುವುದು ಕಷ್ಟ. ಕನಿಷ್ಠ ವೇತನ ಸೌಲಭ್ಯವನ್ನು ನಮಗೂ ಅನ್ವಯಿಸಲಿ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ (ಸ್ವತಂತ್ರ ಸಂಘಟನೆ) ಜಿಲ್ಲಾ ಘಟಕದ ಅಧ್ಯಕ್ಷೆ ತಾರಾ ಬಲ್ಲಾಳ್.

11 ಕೇಂದ್ರಗಳ ಕಟ್ಟಡ ಶಿಥಿಲ

ಪುತ್ತೂರು: ತಾಲ್ಲೂಕಿನ 217 ಮತ್ತು ಕಡಬ ತಾಲ್ಲೂಕಿನ 158 ಸೇರಿ ಅವಿಭಜಿತ ಪುತ್ತೂರು ತಾಲ್ಲೂಕಿನಲ್ಲಿ ಒಟ್ಟು 375 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ಐದು ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ.

ಪುತ್ತೂರು ತಾಲ್ಲೂಕಿನ ಮೈಂದನಡ್ಕ ಮತ್ತು ಪೇರಡ್ಕ ಅಂಗನವಾಡಿ ಕೇಂದ್ರಗಳಿಗೆ ಈ ವರ್ಷ ನರೇಗಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಸ್ವಂತ ಕಟ್ಟಡ ಭಾಗ್ಯ ಸಿಗಲಿದೆ. ಕಡಬ ತಾಲ್ಲೂಕಿನ ಸ್ವಂತ ಕಟ್ಟಡವಿಲ್ಲದ ಅಂಗನವಾಡಿ ಕೇಂದ್ರಗಳ ಪೈಕಿ ಅಂತಿಬೆಟ್ಟು ಅಂಗನವಾಡಿ ಕಟ್ಟಡ ಕಾಮಗಾರಿ ಅನುದಾನದ ಕೊರತೆಯಿಂದ ಅಪೂರ್ಣ ಸ್ಥಿತಿಯಲ್ಲಿದೆ. ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ನಾರ್ಯಬೈಲು ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಈ ವರ್ಷ ಅನುದಾನ ಇಡಲಾಗಿದ್ದು, ಬಂಡಾಜೆ ಕೇಂದ್ರಕ್ಕೆ ಅನುದಾನ ಒದಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೂಡುಬಿದಿರೆಯ ತೆಂಕಮಿಜಾರು ಅಂಗನವಾಡಿ ಕಟ್ಟಡದ ಸನಿಹದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಧರೆ ಕಡಿದಿರುವುದು

ಪುತ್ತೂರು ತಾಲ್ಲೂಕಿನ 9 ಅಂಗನವಾಡಿ ಕೇಂದ್ರಗಳು ಹಾಗೂ ಕಡಬ ತಾಲ್ಲೂಕಿನ 11 ಅಂಗನವಾಡಿ ಕೇಂದ್ರಗಳ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿ ಕಾರ್ಯಕ್ಕಾಗಿ ಮಳೆಹಾನಿ ಯೋಜನೆಯಡಿ ಅನುದಾನ ಒದಗಿಸಲು ವಿನಂತಿಸಲಾಗಿದೆ. ಪುತ್ತೂರು ತಾಲ್ಲೂಕಿನ ಗಾಳಿಮುಖ ಅಂಗನವಾಡಿ ಕೇಂದ್ರ ಕಟ್ಟಡದ ಮಾಡು ಈ ವರ್ಷದ ಮಳೆಯಿಂದಾಗಿ ಹೆಚ್ಚಿನ ಹಾನಿಗೊಳಗಾಗಿದೆ. ಕುಸಿಯುವ ಹಂತದಲ್ಲಿದ್ದ ಗುಡ್ಡದ ಧರೆ ಮತ್ತು ಅಪಾಯಕಾರಿ ಮರ-ಪೊದೆಗಳ ಬದಿಯಲ್ಲಿದ್ದ ಕಾರ್ಯನಿರ್ವಹಿಸುತ್ತಿದ್ದ ಪೆರ್ನಾಜೆಯ ಅಂಗನವಾಡಿ ಕೇಂದ್ರವನ್ನು ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಕ್ರಮವಾಗಿ ಮಳೆಗಾಲದಲ್ಲಿ ಬಂದ್ ಮಾಡಿ, ಅಲ್ಲಿನ ಪುಟಾಣಿಗಳನ್ನು ಖಾಸಗಿ ಶಾಲೆಯೊಂದರ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಅಂಗನವಾಡಿ ಕೇಂದ್ರಗಳಿಗೆ ಅಕ್ಷಯ ಪಾತ್ರೆಯ ಮೂಲಕ ತರಕಾರಿ ವ್ಯವಸ್ಥೆ ಮಾಡಲಾಗುತ್ತಿದೆ. ಯಾರಿಂದಲೂ ಒತ್ತಾಯ ಪೂರ್ವಕವಾಗಿ ತರಿಸಿಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಉಪ್ಪಿನಂಗಡಿಯ ಅಂಗನವಾಡಿಯೊಂದರಲ್ಲಿ ಮಕ್ಕಳ ಶಿಸ್ತಿನ ಕಲಿಕೆ
ಮಾರುಕಟ್ಟೆ ದರ ಆಧರಿಸಿ ಮೊಟ್ಟೆಗೆ ನೀಡುವ ಹಣ ಮಂಜೂರು ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಇದ್ದು ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.
ಉಸ್ಮಾನ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ

‘ಸರಿದೂಗಿಸುವ ಪ್ರಯತ್ನ’

ಉಪ್ಪಿನಂಗಡಿ: ಅಂಗನವಾಡಿಗಳಿಗೆ ಆಹಾರ ಸಾಮಗ್ರಿ ಒಮ್ಮೊಮ್ಮೆ ಮಾತ್ರ ತಡವಾಗಿ ಬರುವುದು ಬಿಟ್ಟರೆ ಸಾಮಾನ್ಯವಾಗಿ ಸಕಾಲದಲ್ಲಿ ಪೂರೈಕೆಯಾಗುತ್ತದೆ. ಮಾರುಕಟ್ಟೆಯಲ್ಲಿ ಮೊಟ್ಟೆ ಕೆಲವೊಮ್ಮೆ ₹6.10ಕ್ಕೆ ದೊರೆತರೆ ಇನ್ನು ಕೆಲವೊಮ್ಮೆ ₹5.80ಕ್ಕೂ ಸಿಗುತ್ತದೆ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ಮೊಟ್ಟೆಗಳನ್ನು ಒದಗಿಸುತ್ತೇವೆ ಎನ್ನುತ್ತಾರೆ ಉಪ್ಪಿನಂಗಡಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ಕಟ್ಟಡ ಸಮರ್ಪಕ: ಮೂಲ ಸೌಕರ್ಯ ಕೊರತೆ

ಉಳ್ಳಾಲ: ತಾಲ್ಲೂಕಿನ 35 ವರ್ಷಗಳಿಂದ ಅಸ್ತಿತ್ವದಲ್ಲಿರುವ ಅಂಗನವಾಡಿಯೊಂದರ ಕಟ್ಟಡಕ್ಕೆ ಮೂಲ ಸೌಲಭ್ಯಗಳಿಲ್ಲ. ಇತ್ತೀಚೆಗೆ ಕಟ್ಟಡಕ್ಕೆ ಬಾಗಿಲು ಅಳವಡಿಸಿದ್ದರೂ ಅದು ಸಮರ್ಪಕವಾಗಿ ಇಲ್ಲದ ಕಾರಣ ಬಾಗಿಲಿನ ಸಂದಿಯಿಂದ ಹಾವು ಒಳಬರಬಹುದೆನ್ನುವ ಆತಂಕವಿದೆ.

ಕಟ್ಟಡದ ತಾರಸಿಗೆ ಹೋಗಲು ವ್ಯವಸ್ಥೆ ಇಲ್ಲದೆ ಕಸ– ಕಡ್ಡಿ ತುಂಬಿ ಮಳೆ ಬಂದಾಗ ಕಟ್ಟಡ ಸೋರುತ್ತದೆ. ಗೋಡೆಗಳನ್ನು ಮುಟ್ಟಿದರೆ ವಿದ್ಯುತ್ ಶಾಕ್ ಹೊಡೆಯುತ್ತದೆ ಎನ್ನುತ್ತಾರೆ ಸ್ಥಳೀಯರು. ಕಾಂಪೌಂಡ್ ಇಲ್ಲದ ಕಾರಣ ಸುತ್ತ ನಾಯಿಗಳ ಸಾಮ್ರಾಜ್ಯ ವಿಸ್ತರಿಸಿದೆ. ಸಮೀಪದಲ್ಲಿರುವ ಚರಂಡಿ ನಿರ್ವಹಣೆಯಾಗುತ್ತಿಲ್ಲ. ಪರಿಣಾಮ ಸೊಳ್ಳೆಕಾಟ ಪಾಲಕರ ನಿದ್ದೆಗೆಡಿಸಿದೆ. ಕಿಟಕಿಗಳಿಗೆ ನೆಟ್‌ ಹಾಕಿ ಮಕ್ಕಳಿಗೆ ಸೊಳ್ಳೆ ಕಾಟದಿಂದ ರಕ್ಷಣೆ ನೀಡಬೇಕು. ಮಕ್ಕಳಿಗೆ ನೀಡುವ ಆಹಾರ ಸಕಾಲಕ್ಕೆ ಬರುವಂತಾಗಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಮಕ್ಕಳು ಜಾಸ್ತಿ ಇರುವ ಅಂಗನವಾಡಿಗಳಲ್ಲೂ ಒಬ್ಬರೇ ಶಿಕ್ಷಕಿ ನಿರ್ವಹಣೆ ಮಾಡುವುದು ಕಷ್ಟ. ಕೆಲವು ಕಡೆ ಕಟ್ಟಡವೇ ಸರಿಯಾಗಿಲ್ಲ. ಇದನ್ನು ಹೇಳಿಕೊಂಡರೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ನೇಮಕಾತಿ ವಯೋಮಿತಿ ಹೆಚ್ಚಿಸಬೇಕು ಎಂದು ಇನ್ನೊಂದು ಅಂಗನವಾಡಿ ಕಾರ್ಯಕರ್ತೆ ಹೇಳಿಕೊಂಡರು.

ಹೆದ್ದಾರಿ ಬದಿಯ ಕಟ್ಟಡ ಅಭದ್ರ

ಮೂಡುಬಿದಿರೆ: ತಾಲ್ಲೂಕಿನಲ್ಲಿ 113 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನವು ಸ್ವಂತ ಕಟ್ಟಡದಲ್ಲಿವೆ. ಮೂಡುಬಿದಿರೆ ವಲಯಕ್ಕೊಳಪಟ್ಟ ಜೈನಪೇಟೆಯ ಅಂಗನವಾಡಿ ಕೇಂದ್ರವು ಖಾಸಗಿ ಶಾಲೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇರುವೈಲು ಪೊರಿಮೇಲ್‌ನಲ್ಲಿ ಸುಮಾರು 20 ವರ್ಷಗಳಿಂದ ಅಂಬೇಡ್ಕರ್ ಭವನ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಇಲ್ಲಿ ಅಂಗನವಾಡಿಗೆ ಸ್ವಂತ ಜಾಗ ಗುರುತಿಸಲು ತೊಡಕಾಗಿತ್ತು. ಅಳಿಯೂರು ಮತ್ತು ವಾಲ್ಪಾಡಿ ಮಾಡದಂಗಡಿಯ ಅಂಗನವಾಡಿಗಳು ಸರ್ಕಾರಿ ಶಾಲೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರಣಕ್ಕೆ ತೆಂಕಮಿಜಾರಿನ ಉಲಾಯ್ದಂಗಡಿಯ ಅಂಗನವಾಡಿ ಕಟ್ಟಡದ ಹತ್ತಿರದವರೆಗೆ ಮಣ್ಣನ್ನು ಅಗೆಯಲಾಗಿದ್ದು ಕಟ್ಟಡ ಅಭದ್ರವಾಗಿದೆ.

ಇಲ್ಲಿನ ಮಕ್ಕಳನ್ನು ಹಾಲಿನ ಡೈರಿಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದ್ದು ಅಂಗನವಾಡಿ ಕಟ್ಟಡವನ್ನು ಮಕ್ಕಳಿಗೆ ಅಡುಗೆ ತಯಾರಿಸಲು ಬಳಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ತೆಂಕಮಿಜಾರು ಉಲಾಯ್ದಂಗಡಿಯ ಅಂಗನವಾಡಿ ಕಟ್ಟಡವು ರಾಷ್ಟ್ರೀಯ ಹೆದ್ದಾರಿಗೆ ಸನಿಹದಲ್ಲಿರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕಟ್ಟಡದ ವೆಚ್ಚ ಭರಿಸುವಂತೆ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ ಎಂದು ತೆಂಕಮಿಜಾರು ಗ್ರಾಮ ಪಂಚಾಯಿತಿ ಸದಸ್ಯ ಜೆ.ಕೆ. ಹಸನಬ್ಬ ಪ್ರತಿಕ್ರಿಯಿಸಿದರು.

ಅಶಕ್ತರಿಗೆ ನೆರವು

ಅಂಗನವಾಡಿ ಕಾರ್ಯಕರ್ತರು ಸಹಾಯಕಿಯರು ಸೇರಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಮಾಜಸೇವಾ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಪ್ರತಿ ತಿಂಗಳು ಅಲ್ಪ ಹಣವನ್ನು ಇದರಲ್ಲಿ ಕೂಡಿಟ್ಟು ನಿವೃತ್ತರಾಗಿ ಅಸಹಾಯಕ ಸ್ಥಿತಿಯಲ್ಲಿರುವ 12ರಷ್ಟು ಕಾರ್ಯಕರ್ತೆಯರು ಸಹಾಯಕರಿಗೆ ಪ್ರತಿ ತಿಂಗಳು ಕಿಂಚಿತ್ ನೆರವು ನೀಡುತ್ತಿದ್ದಾರೆ.

‘ತಿಂಗಳೊಳಗೆ ಹುದ್ದೆ ಭರ್ತಿ’

ಕಟ್ಟಡದ ಇಲ್ಲದ ಅಂಗನವಾಡಿಗಳಿಗೆ ಆದ್ಯತೆಯ ಮೇಲೆ ಜಾಗ ಒದಗಿಸಲಾಗುತ್ತಿದೆ. ಕಟ್ಟಡ ತುಂಬಾ ಶಿಥಿಲ ಆಗಿದ್ದರೆ ಅದನ್ನು ಕೂಡ ಪರಿಗಣಿಸಲಾಗುತ್ತದೆ. ಸರ್ಕಾರ ಈ ಬಾರಿ 592 ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರು ನೀಡಿದ್ದು ದಕ್ಷಿಣ ಕನ್ನಡ ಸೇರಿದಂತೆ ಎಲ್ಲ ಜಿಲ್ಲೆಗಳಿಗೆ ಹಂಚಿಕೆಯಾಗಲಿದೆ. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಹುದ್ದೆಗಳ ಭರ್ತಿಗೆ ವಿಧಾನ ಪರಿಷತ್ ಉಪ ಚುನಾವಣೆಯ ನೀತಿ ಸಂಹಿತೆ ಇದ್ದ ಕಾರಣ ವಿಳಂಬವಾಗಿದೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ಇನ್ನು ಒಂದು ತಿಂಗಳ ಒಳಗಾಗಿ ಎಲ್ಲ ಹುದ್ದೆಗಳು ಭರ್ತಿಯಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಪ್ರತಿಕ್ರಿಯಿಸಿದರು.

(ಪೂರಕ ಮಾಹಿತಿ: ಶಶಿಧರ್ ರೈ ಕುತ್ಯಾಳ್, ಪ್ರಸನ್ನ ಹೆಗ್ಡೆ, ಮೋಹನ್‌ ಕುತ್ತಾರ್, ಸಿದ್ದಿಕ್ ನೀರಾಜೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.