ADVERTISEMENT

ಮಂಗಳೂರು ಕಮಿಷನರೇಟ್‌ನಲ್ಲಿ ಕೋಮು ದ್ವೇಷ ನಿಗ್ರಹ ಘಟಕ ಸ್ಥಾಪನೆ: ಗೃಹ ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 11:23 IST
Last Updated 6 ಜೂನ್ 2023, 11:23 IST
   

ಮಂಗಳೂರು: ಮತೀಯ ದ್ವೇಷ ಬಿತ್ತುವ ಚಟುವಟಿಕೆಗಳನ್ನು ಹತ್ತಿಕ್ಕಲು ಇಲ್ಲಿನ ಪೊಲೀಸ್‌ ಕಮಿಷನರೇಟ್‌ನಲ್ಲಿ ‘ಕೋಮು ದ್ವೇಷ ನಿಗ್ರಹ ಘಟಕ’ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಶ್ಚಿಮ ವಲಯ ಐಜಿಪಿ ಕಚೇರಿ ವ್ಯಾಪ್ತಿಯ ಹಾಗೂ ಇಲ್ಲಿನ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

‘ಕರಾವಳಿಯಲ್ಲಿ ಮತೀಯ ಸಾಮರಸ್ಯ ಕದಡುವ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿವೆ. ಇಂತಹ ಕೃತ್ಯಗಳನ್ನು ಮಟ್ಟಹಾಕಲು ಕಮಿಷನರೇಟ್‌ ವ್ಯಾಪ್ತಿಯ ಸಮರ್ಥ ಅಧಿಕಾರಿಗಳನ್ನು ಈ ಘಟಕಕ್ಕೆ ನೇಮಿಸುವಂತೆ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರಿಗೆ ಸೂಚನೆ ನೀಡಿದ್ದೇನೆ. ಇದರ ಕಾರ್ಯಾಚರಣೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಅವರೇ ರೂಪಿಸಲಿದ್ದಾರೆ’ ಎಂದರು.

ADVERTISEMENT

‘ಕೋಮು ಸಾಮರಸ್ಯ ಕದಡುವ ಕೃತ್ಯಗಳನ್ನು ನಿಯಂತ್ರಿಸಲು ಹಾಗೂ ಮತೀಯ ಗೂಂಡಾಗಿರಿಯಂತಹ ಚಟುವಟಿಕೆ ಹತ್ತಿಕ್ಕಲು ಈ ಘಟಕವು ಗಮನ ಕೇಂದ್ರೀಕರಿಸಲಿದೆ. ಪೊಲೀಸರು ಕೇವಲ ಹೊಡೆ–ಬಡಿ ಪರಿಭಾಷೆಯ ಮೂಲಕ ಮಾತ್ರವಲ್ಲ; ಸಮಾಜದ ಜೊತೆ ಉತ್ತಮ ಸಂಪರ್ಕ ಸಾಧಿಸುವ ಮೂಲಕವೂ ಸಾಮರಸ್ಯ ಉಳಿಸುವ ಮಹತ್ವ ಸಾರುವ ಕೆಲಸ ಮಾಡಲಿದ್ದಾರೆ. ಈ ಘಟಕದ ವಿಶೇಷ ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ, ಶಾಂತಿ– ಸಾಮರಸ್ಯ ಕಾಪಾಡುವ ಸಂದೇಶ ಸಾರಲಿದ್ದಾರೆ’ ಎಂದರು.

‘ಸದ್ಯಕ್ಕೆ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮಾತ್ರ ಇಂತಹ ಘಟಕವನ್ನು ಸ್ಥಾಪಿಸಲಿದ್ದೇವೆ. ಅಗತ್ಯ ಬಿದ್ದರೆ ಎಲ್ಲೆಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತದೋ, ಅಂತಹ ಕಡೆಯೂ ಇಂತಹ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇವೆ. ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಕರಣಗಳನ್ನು ಹತ್ತಿಕ್ಕಲು ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲು ಈ ಘಟಕ ನೆರವಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಗೃಹಸಚಿವರು ಉತ್ತರಿಸಿದರು.

‘ಮತೀಯ ಗೂಂಡಾಗಿರಿಯಂತಹ ಪ್ರಕರಣಗಳಿಂದ ಪೊಲೀಸ್‌ ಇಲಾಖೆಗೂ ಕೆಟ್ಟ ಹೆಸರು ಬರುತ್ತಿದೆ. ಇಂತಹ ಪ್ರಕರಣಗಳು ನಡೆಯದಂತೆ ಮತ್ತು ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಪೊಲೀಸ್‌ ಅಧಿಕಾರಿಗಳ ಜವಾಬ್ದಾರಿ. ಅವರು ಇಂತಹ ಪ್ರಕರಣಗಳನ್ನು ಆಗಾಗ ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಿದ್ದೇವೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಗಡಿಪಾರು ಮಾಡುವುದಕ್ಕೂ ಅವಕಾಶ ಇದೆ’ ಎಂದರು.

‘ಜಿಲ್ಲೆಯಲ್ಲಿ ಈಚೆಗೆ ಕೋಮುದ್ವೇಷದಿಂದಾಗಿ ನಡೆದ ಆರೇಳು ಕೊಲೆ ಪ್ರಕರಣಗಳಲ್ಲಿ ಕೆಲವು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಿಲ್ಲ ಎಂಬ ದೂರು ಇದೆ. ಮಸೂದ್‌, ಫಾಝಿಲ್‌, ದೀಪಕ್‌ ರಾವ್‌, ಜಲೀಲ್‌ ಕುಟುಂಬಗಳಿಗೂ ಪರಿಹಾರ ನೀಡುವ ಬಗ್ಗೆ ಪ್ರಸ್ತಾಪ ಸಲ್ಲಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ’ ಎಂದರು.

‘ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಮಾದರಿಯಲ್ಲೇ ಫಾಝಿಲ್‌, ಮಸೂದ್‌ ಕೊಲೆಗಳೂ ಕೋಮುದ್ವೇಷದಿಂದ ನಡೆದಿದ್ದರೂ, ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮಾತ್ರ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಎಫ್‌ಐಆರ್‌ ದಾಖಲಿಸುವ ಮೂಲಕ ತಾರತಮ್ಯ ಎಸಗಲಾಗಿದೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ‘ಸದ್ಯ ಈ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಹಾಗಾಗಿ ನಾನು ಏನೂ ಹೇಳಲು ಬಯಸುವುದಿಲ್ಲ. ಒಂದು ವೇಳೆ ಪೊಲೀಸರು ಎಫ್‌ಐಆರ್‌ ದಾಖಲಿಸುವಾಗ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದರೆ, ಸಹಜವಾಗಿಯೇ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಈ ಪ್ರಕರಣಗಳ ಮರು ತನಿಖೆ ನಡೆಸಿ ಎಂದು ನ್ಯಾಯಾಲಯ ಸೂಚಿಸಿದರೆ, ಅದಕ್ಕೂ ಸಿದ್ಧ’ ಎಂದರು.

’ನಿಷೇಧಿತ ಮಾದಕ ಪದಾರ್ಥಗಳ ಮಾರಾಟ ಮತ್ತು ಸೇವನೆ ತಡೆಯಲು ಆಗಸ್ಟ್‌ 15ರ ಗಡುವು ವಿಧಿಸಿದ್ದೇನೆ. ಅಷ್ಟರ ಒಳಗೆ ಇಂತಹ ಚಟುವಟಿಕೆಯನ್ನು ಸಂಪೂರ್ಣ ಮಟ್ಟ ಹಾಕಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಟ್ಕಾ, ಜೂಜು ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನೂ ನಿಗ್ರಹಿಸಬೇಕು ಎಂದೂ ಸೂಚಿಸಿದ್ದೇನೆ. ಅವರು ಈ ಪ್ರಕಾರ ನಡೆದುಕೊಳ್ಳುವ ವಿಶ್ವಾಸ ಇದೆ’ ಎಂದರು.

‘ನಿಷೇಧಿತ ಮಾದಕ ಪದಾರ್ಥ ಸೇವನೆಯಂತಹ ಚಟುವಟಿಕೆ ತಡೆಯಲು ಸಹಕರಿಸುವಂತೆ ವಿದ್ಯಾರ್ಥಿಗಳನ್ನೂ ಕೋರುತ್ತೇನೆ. ಮಂಗಳೂರಿನಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಬಹಳಷ್ಟಿವೆ. ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾಗಿದ್ದ ಪ್ರದೇಶ. ಈ ಗತವೈಭವನ್ನು ಮರಳಿ ಸ್ಥಾಪಿಸಲು ಎಲ್ಲರ ಸಹಕಾರ ಅಗತ್ಯ. ವಿದ್ಯಾರ್ಥಿಗಳು ಸಹಕಾರ ನೀಡಿದರೆ ಕಾನೂನು ಕ್ರಮ ಕೈಗೊಳ್ಳುವ ಅಗತ್ಯ ಬೀಳುವುದಿಲ್ಲ’ ಎಂದರು.

ಎಡಿಜಿಪಿ (ಕಾನೂನು ಸುವ್ಯವಸ್ಥೆ) ಅಲೋಕ್‌ ಕುಮಾರ್, ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌ ಜೈನ್‌, ಪಶ್ಚಿಮ ವಲಯದ ಡಿಐಜಿ ಚಂದ್ರಗುಪ್ತ, ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾಪ್ರಶಾಂತ್‌, ದಕ್ಷಿನ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.