ADVERTISEMENT

ಕುಡುಪು–ಟಿಡಿಆರ್‌ ಕಡತ ವಿಲೇವಾರಿಗೆ ಅವಕಾಶ ನೀಡದಿರಿ: ಮನವಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 4:25 IST
Last Updated 30 ಮಾರ್ಚ್ 2024, 4:25 IST

ಮಂಗಳೂರು: ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿಯಲ್ಲಿರುವ 10.8 ಎಕರೆ  ಜಮೀನಿನ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಸಂಬಂಧಿಸಿದಂತೆ ಕಡತವನ್ನು ವಿಲೇವಾರಿಗೆ ಸೂಚನೆ/ ಆದೇಶ ನೀಡದಂತೆ ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಮನವಿ ಮಾಡಿದೆ. 

‘ಈ ಪ್ರಕರಣದಲ್ಲಿ ಗಿರಿಧರ್ ಶೆಟ್ಟಿ ಜಮೀನಿನ ಮಾಲಿಕರಿಂದ ಭೂ ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದು, ಅದರ ಟಿಡಿಆರ್  ಪ್ರಮಾಣಪತ್ರವನ್ನು ತನ್ನ ಪರವಾಗಿ ನೀಡಬೇಕೆಂದು ಬೇಡಿಕೆ ಇಟ್ಟಿರುವುದು ನಿಯಮಬಾಹಿರ. ಟಿಡಿಆರ್ ನಿಯಮ ಪ್ರಕಾರ ಮೂಲ ಮಾಲಕನ ಬದಲಿಗೆ ಮಧ್ಯವರ್ತಿ, ಜಮೀನಿನ ಖರೀದಿ ಒಪ್ಪಂದ ಮಾಡಿಕೊಂಡ ಬಿಲ್ಡರ್‌ ಜೊತೆ ವ್ಯವಹಾರಕ್ಕೆ ಅವಕಾಶವಿಲ್ಲ. ಈ ಪ್ರಕರಣದಲ್ಲಿ ಪಾಲಿಕೆಯ ನಡೆಯೂ ಕಾನೂನುಬಾಹಿರ’ ಎಂದು ವೇದಿಕೆ ಸಂಚಾಲಕ ಮುನೀರ್‌ ಕಾಟಿಪಳ್ಳ ಆರೋಪಿಸಿದ್ದಾರೆ.

‘ಈ ಕಡತಕ್ಕೆ ಸಹಿ ಹಾಕಲು ಕಡತಕ್ಕೆ ಸಹಿ ಮಾಡಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಅಲಿ ಅವರು ₹ 25 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಸಾಮಾನ್ಯವಾಗಿ ಕಡತಕ್ಕೆ ಸಹಿ ಮಾಡಲು ವಿಳಂಬ ಮಾಡಿದ, ಹಣದ ಬೇಡಿಕೆ ಇಟ್ಟ ಆರೋಪದ ಮೇಲೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದಾಗ,  ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ಕಡತಕ್ಕೆ ಸಹಿ ಹಾಕುವ ಸಂಭವವಿರುತ್ತದೆ. ಅದಕ್ಕೆ ಅವಕಾಶ ನೀಡಬಾರದು‘ ಎಂದು ಕೋರಿದ್ದಾರೆ.

ADVERTISEMENT

ಟಿಡಿಆರ್‌ ನೀಡಿ ಭೂಸ್ವಾಧೀನ ಮಾಡಿರುವುದರದ ಹಿಂದೆ ಹಗರಣ ನಡೆದಿದೆ. ಟಿಡಿಆರ್‌ ಪಡೆಯಲು ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿಸಿದ ಅನುಮಾನವಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.