ADVERTISEMENT

ಮಂಗಳೂರು: ಸರ್ಕಾರಿ ಶಾಲೆಯ ಗೋಡೆಯಲ್ಲಿ ರಂಗು ರಂಗಿನ ಚಿತ್ತಾರ

ವಳಚ್ಚಿಲ್‌ನ ಶ್ರೀನಿವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಆರ್ಕಿಟೆಕ್ಚರ್‌ ವಿದ್ಯಾರ್ಥಿಗಳಿಂದ ಬಿಕರ

ಪ್ರವೀಣ ಕುಮಾರ್ ಪಿ.ವಿ.
Published 3 ಫೆಬ್ರುವರಿ 2023, 6:25 IST
Last Updated 3 ಫೆಬ್ರುವರಿ 2023, 6:25 IST
ಜನಾರ್ದನ ಹಾವಂಜೆ
ಜನಾರ್ದನ ಹಾವಂಜೆ   

ಮಂಗಳೂರು: ನಗರದ ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳು ರಂಗುರಂಗಿನ ಚಿತ್ತಾರಗಳಿಂದ ಕಂಗೊಳಿಸುತ್ತಿವೆ. ಕಂಬ ಕಂಬಗಳಲ್ಲಿ ಜಗತ್ತಿನ ಎಂಟು ವಿಸ್ಮಯಗಳ ಬಿಂಬಗಳು, ಜೀರ್ಣಾಂಗ ವ್ಯವಸ್ಥೆ, ಸೌರವ್ಯೂಹದಿಂದ ಹಿಡಿದು ರಾಕೆಟ್‌ ತಂತ್ರಜ್ಞಾನದವರೆಗೆ ವಿಜ್ಞಾನದ ಕ್ಲಿಷ್ಟ ವಿಚಾರಗಳನ್ನು ಕಟ್ಟಿಕೊಡುವ ರಂಗು ರಂಗಿನ ಚಿತ್ರಗಳು, ಭಾವೈಕ್ಯವನ್ನು ಸಾರುವ ಕಾರ್ಟೂನುಗಳು... ಹೀಗೆ ಹತ್ತು ಹಲವು ಚಿತ್ತಾರಗಳು ಶಾಲೆಗೆ ಹೊಸ ಮೆರುಗು ನೀಡಿವೆ.

ಇದಕ್ಕೆ ಕಾರಣವಾಗಿರುವುದು ವಳಚ್ಚಿಲ್‌ನ ಶ್ರೀನಿವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸ್ಕೂಲ್ ಆಫ್‌ ಆರ್ಕಿಟೆಕ್ಚರ್‌ನ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಹುಮ್ಮಸ್ಸು ಒಂದೆಡೆಯಾದರೆ, ಪುಟಾಣಿಗಿಂದ ತೂರಿಬರುವ ಕೌತುಕಮಯ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಅನಿವಾರ್ಯ ಇನ್ನೊಂದೆಡೆ. ಸರ್ಕಾರಿ ಶಾಲೆಯ ಚಿಣ್ಣರಿಗೋ, ಶಾಲೆಯ ಗೋಡೆ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಅರಳುವ ಪರಿಯನ್ನು ಬೆರಗುಗಣ್ಣುಗಳಿಂದ ಮನತುಂಬಿಕೊಳ್ಳುವ ತವಕ.

‘ಮಕ್ಕಳಿಗೆ ಶೈಕ್ಷಣಿಕವಾಗಿ ಉಪಯೋಗವಾಗುವಂತಹ ಚಿತ್ರಗಳನ್ನೇ ಬಿಡಿಸಿದ್ದೇವೆ. ರಂಗುರಂಗಿನ ಚಿತ್ತಾರಗಳು, ಕಾರ್ಟೂನುಗಳು, ಶಾಲೆಯ ಅಂದ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಪಠ್ಯ ವಿಷಯಗಳತ್ತ ಕುತೂಹಲ ಕೆರಳುವಂತೆಯೂ ಮಾಡುತ್ತವೆ’ ಎನ್ನುತ್ತಾರೆ ಕಾಲೇಜಿನ ಆರ್ಕಿಟೆಕ್ಚರ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜನಾರ್ದನ ಹಾವಂಜೆ.

ADVERTISEMENT

‘ಶಾಲೆಯ ಗೋಡೆಗಳಿಗೆ ಈ ರೀತಿ ಚಿತ್ರ ಬಿಡಿಸಲು ಏನಿಲ್ಲವೆಂದರೂ ₹ 1.5 ಲಕ್ಷ ವೆಚ್ಚವಾಗುತ್ತದೆ. ನಮ್ಮ ವಿದ್ಯಾರ್ಥಿಗಳು ಉಚಿತವಾಗಿ ಇವುಗಳನ್ನು ಬಿಡಿಸಿಕೊಡುತ್ತಿದ್ದಾರೆ. ನಿಪ್ಪಾನ್‌ ಪೇಂಟ್‌ ಕಂಪನಿಯು ಬಣ್ಣಗಳನ್ನು ಉಚಿತವಾಗಿ ಪೂರೈಸಿದೆ. ರಾಯ್‌ ಕ್ಯಾಸ್ಟಲಿನೊ ಆರ್ಥಿಕ ನೆರವು ನೀಡಿದ್ದಾರೆ‘ ಎಂದರು.

ಜನಾರ್ದನ ಹಾವಂಜೆ ಹಾಗೂ ಕಾಲೇಜಿನ ಇನ್ನೊಬ್ಬ ಸಹಾಯಕ ಪ್ರಾಧ್ಯಾಪಕಿ ಶ್ರಾವ್ಯ ಹೆಗ್ಡೆ ಈ ಚಿತ್ತಾರದ ಪರಿಕಲ್ಪನೆ ರೂಪಿಸಿದ್ದಾರೆ.

‘ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀನಿವಾಸ ಮಯ್ಯ ಹಾಗೂ ನಮ್ಮ ವಿಭಾಗದ ಮುಖ್ಯಸ್ಥ ವಾಸುದೇವ ಶೇಟ್‌ ಅವರ ಸಹಕಾರದಿಂದ ಸರ್ಕಾರಿ ಶಾಲೆಯ ಪರಿಸರವನ್ನು ಅಂದಗೊಳಿಸುವ ಪರಿಕಲ್ಪನೆ ಸಾಕಾರಗೊಂಡಿದೆ. ಇದು ಆರ್ಕಿಟೆಕ್ಚರ್‌ ವಿದ್ಯಾರ್ಥಿಗಳಿಗೆ ಕಲಿಕೆಯ ಹೊಸ ವಾತಾವರಣವನ್ನು ಕಲ್ಪಿಸುತ್ತದೆ. ಅವರ ಕಲ್ಪನಾ ಶಕ್ತಿಯ ಪ್ರಾಯೋಗಿಕ ಅನುಷ್ಠಾನಕ್ಕೂ ಇದರಿಂದ ಅವಕಾಶ ಸಿಗುತ್ತದೆ’ ಎಂದು ಜನಾರ್ದನ ಅವರು ತಿಳಿಸಿದರು.

‘ನಮ್ಮ ಶಾಲೆಯ ಗೋಡೆಗಳು ಒಪ್ಪಓರಣವಾಗಿರಬೇಕು ಎಂಬ ಆಸೆ ನಮಗೂ ಇತ್ತು. ಯಾರಾದರೂ ದಾನಿಗಳನ್ನು ಹುಡುಕಿ ಪೇಂಟಿಂಗ್‌ ಮಾಡಿಸಲು ನಿರ್ಧರಿಸಿದ್ದೆವು. ವಳಚ್ಚಿಲ್‌ ಶ್ರೀನಿವಾಸ ಕಾಲೇಜಿನ ಆರ್ಕಿಟೆಕ್ಚರ್‌ ವಿಭಾಗದವರು ತಾವಾಗಿಯೇ ಮುಂದೆ ಬಂದು ಉಚಿತವಾಗಿ ಚಿತ್ತಾರ ಬಿಡಿಸಿಕೊಟ್ಟಿದ್ದಾರೆ. ಗೋಡೆಗಳಿಗೆ ಬಿಳಿ ಬಣ್ಣ ಬಳಿದುಕೊಟ್ಟು ಹಳೆ ವಿದ್ಯಾರ್ಥಿ ಶರತ್‌ಚಂದ್ರ ಚಿತ್ತಾರ ಮೂಡಿಸಲು ನೆರವಾಗಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕಿ ರಾಜೀವಿ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

**

‘ಚಿತ್ರ ಬಿಡಿಸುತ್ತಾ ನಾವೂ ಕಲಿತೆವು’

‘ಶಾಲೆಯಲ್ಲಿ ಚಿಣ್ಣರ ಎದುರೇ ಚಿತ್ರ ಬಿಡಿಸುವುದು ನಮಗೆ ಸವಾಲಿನ ವಿಷಯವಾಗಿತ್ತು. ಮಕ್ಕಳು ಕೇಳುವ ಕುತೂಹಲಭರಿತ ಪ್ರಶ್ನೆಗಳಿಗೂ ನಾವು ತಾಳ್ಮೆಯಿಂದ ಉತ್ತರಿಸಬೇಕಿತ್ತು. ರಂಗುರಂಗಿನ ಚಿತ್ರಗಳನ್ನು ಬಿಡಿಸುತ್ತಲೇ ನಾವು ಪ್ರಾಯೋಗಿಕವಾಗಿ ಅನೇಕ ಹೊಸ ವಿಚಾರಗಳನ್ನು ಕಲಿತಿದ್ದೇವೆ. ಈ ಬಣ್ಣಗಳನ್ನು ನೋಡಿ ಚಿಣ್ಣರ ಕಣ್ಣುಗಳಲ್ಲಿ ಮೂಡುವ ವಿಸ್ಮಯ ಭಾವವನ್ನು ಕಂಡಾಗ ನಮ್ಮ ಪ್ರಯತ್ನ ಸಾರ್ಥಕವೆನಿಸಿತು’ ಎಂದು ಆರ್ಕಿಟೆಕ್ಚರ್‌ ವಿದ್ಯಾರ್ಥಿನಿ ಪೂರ್ವಿ ಅಭಿಪ್ರಾಯಪಟ್ಟರು.

‘ಈ ಸಮಾಜ ಕಾರ್ಯ ನಮ್ಮ ಪ್ರತಿಭೆ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಿದೆ. ನಮ್ಮದೇ ಕಲ್ಪನೆಯ ಭಿತ್ತಿ ಚಿತ್ತಾರಗಳನ್ನು ರೂಪಿಸಲು ಇಂತಹ ಅವಕಾಶ ಸಿಗುವುದಿಲ್ಲ. ಇದರಿಂದ ಶಾಲೆಗೂ ಒಳಿತಾಗುತ್ತದೆ‘ ಎಂದು ಇನ್ನೊಬ್ಬ ವಿದ್ಯಾರ್ಥಿ ಆದಿತ್ಯ ತಿಳಿಸಿದರು.

**

ರಂಗು ರಂಗಿನ ಚಿತ್ತಾರಗಳಿಂದ ಶಾಲೆಯ ಗೋಡೆಗಳು ಅಂದವಾಗಿವೆ. ಶೈಕ್ಷಣಿಕ ವಿಚಾರದ ಹಾಗೂ ಭಾವೈಕ್ಯ ಮೂಡಿಸುವ ಚಿತ್ತಾರಗಳು ಮಕ್ಕಳಲ್ಲಿ ಕುತೂಹಲ ಕೆರಳಿಸುವಂತಿವೆ

ರಾಜೀವಿ, ಮುಖ್ಯಶಿಕ್ಷಕಿ, ಬಿಕರ್ನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

**

ಸರ್ಕಾರಿ ಶಾಲೆಯನ್ನು ಅಂದಗೊಳಿಸುವುದು ನಮ್ಮ ಉದ್ದೇಶ. ಈ ಸಮಾಜಕಾರ್ಯಕ್ಕೆ ನಾವು ಕೋಟರಿ ಎಂದು ಹೆಸರಿಟ್ಟಿದ್ದೇವೆ. ಅಂದಗೊಳಿಸು ಎಂಬುದು ಇದರರ್ಥ
ಡಾ.ಜನಾರ್ದನ ಹಾವಂಜೆ, ಶ್ರೀನಿವಾಸ ಕಾಲೇಜಿನ ಆರ್ಕಿಟೆಕ್ಚರ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ

ಮುಖ್ಯಾಂಶ

ಕಂಬ ಕಂಬಗಳಲ್ಲಿ ಜಗತ್ತಿನ ಎಂಟು ವಿಸ್ಮಯಗಳ ಬಿಂಬ

ಜೀರ್ಣಾಂಗದಿಂದ ರಾಕೆಟ್‌ ವಿಜ್ಞಾನದವರೆಗೆ ಕೌತುಕಮಯ ಚಿತ್ತಾರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.