ಮಂಗಳೂರು: ಅಡಿಕೆ ಕ್ಯಾನ್ಸರ್‌ಕಾರಕವೆಂಬ ನಿರ್ಣಯ ಏಕಪಕ್ಷೀಯವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮರುಪರಿಶೀಲಿಸಬೇಕು ಎಂದು ಕ್ಯಾಂಪ್ಕೊ ಒತ್ತಾಯಿಸಿದೆ.
ಈ ಸಂಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ನವದೆಹಲಿಯ ಭಾರತೀಯ ಕೃಷಿ ಮಂಡಳಿ (ಐಸಿಎಆರ್), ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ವಿನಂತಿಸಿದೆ.
ಅಡಿಕೆಯು ಆಯುರ್ವೇದೀಯ ಗುಣಗಳನ್ನು ಹೊಂದಿದ್ದರೂ, ಅದು ಕ್ಯಾನ್ಸರ್ ಕಾರಕವೆಂದು ವಿಶ್ವ ಆರೋಗ್ಯ ಸಂಸ್ಥೆ ಏಕಪಕ್ಷೀಯ ನಿರ್ಣಯ ಮಾಡಿದೆ. ಪುರಾತನ ಕಾಲದಿಂದಲೂ ಅಡಿಕೆಗೆ ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನ ಪಡೆದಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ಕುಮಾರ್ ಕೊಡ್ಗಿ ಹೇಳಿದ್ದಾರೆ.
ಔಷಧೀಯ ಗುಣ ಹೊಂದಿದ ಕಾರಣಕ್ಕೆ ಆಯುರ್ವೇದ ಶಾಸ್ತ್ರದಲ್ಲಿಯೂ ವಿಶೇಷ ಸ್ಥಾನವಿದೆ. ಅಡಿಕೆ, ಕಫ ಮತ್ತು ಪಿತ್ತದ ಸಮಸ್ಯೆ ಶಮನಗೊಳಿಸುವ ಮತ್ತು ಜೀರ್ಣಕ್ರಿಯೆ ಉದ್ದೀಪನಗೊಳಿಸುವ ಗುಣ ಹೊಂದಿದೆ. ಆದರೆ, ಡಬ್ಲ್ಯುಎಚ್‌ಒ ನೀಡಿರುವ ವರದಿ ಅಡಿಕೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ (ಐಎಆರ್‌ಸಿ) ವರದಿಯು ಸಂಶೋಧನೆಯ ಪೂರ್ಣ ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ, ಸತ್ಯ ಮುಚ್ಚಿಟ್ಟಿರಬಹುದು ಅಥವಾ ವರದಿ ತಿರುಚಿರಬಹುದೆಂಬ ಸಂಶಯ ಮೂಡುತ್ತದೆ ಎಂದು ಹೇಳಿದ್ದಾರೆ.
ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು, ಎಲ್ಲ ವರದಿಗಳು ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಬದಲಾಗಿ ರೋಗಶಮನಗೊಳಿಸುವ ಔಷಧೀಯ ಗುಣ ಹೊಂದಿರುವ ಬಗ್ಗೆ ದೃಢಪಡಿಸಿವೆ. ಅನೇಕ ಸಂಸ್ಥೆಗಳು ಸಹ ಸಂಶೋಧನೆ ನಡೆಸಿ, ಅಡಿಕೆಯಲ್ಲಿರುವ ಔಷಧೀಯ ಗುಣಗಳನ್ನು ತಿಳಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿ ಚರ್ಚಿಸಿದಾಗ, ಐಸಿಎಂಆರ್ ಮತ್ತು ಐಸಿಎಆರ್ ಸಂಶೋಧನೆ ನಡೆಸಿ, ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಾದವನ್ನು ಸಮರ್ಥವಾಗಿ ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಅಡಿಕೆ ಕ್ಯಾನ್ಸರ್‌ಕಾರಕವಲ್ಲ. ಆರೋಗ್ಯಕ್ಕೂ ಹಾನಿ ಆಗಲ್ಲ ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕುವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.