ಸುಳ್ಯ: ಅಡಿಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗದ ಪರಿಹಾರಕ್ಕಾಗಿ ಸಂಶೋಧನೆ ಅಗತ್ಯ. ಈ ನಿಟ್ಟಿನಲ್ಲಿ ಇಸ್ರೇಲ್ ದೇಶದ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು.
ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗ ಬಾಧಿತ ಮರ್ಕಂಜ ಗ್ರಾಮದ ಅಡಿಕೆ ತೋಟಗಳನ್ನು ಭಾನುವಾರ ವೀಕ್ಷಿಸಿದ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.
ಅಡಿಕೆ ಹಳದಿ ರೋಗಕ್ಕೆ ಔಷಧಿ, ಪರಿಹಾರ ದೊರಕಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ. ಮುಂದಿನ ತಿಂಗಳು ಇಸ್ರೇಲ್ ದೇಶಕ್ಕೆ ಭೇಟಿ ನೀಡಿ ಅಲ್ಲಿನ ವಿಜ್ಞಾನಿಗಳ ಜೊತೆ ಚರ್ಚೆ ನಡೆಸುತ್ತೇವೆ. ಪರಿಹಾರಕ್ಕೆ ಪ್ರಯತ್ನಿಸುತ್ತೇವೆ. ಹಳದಿ ಹಾಗು ಎಲೆಚುಕ್ಕಿ ಎರಡಕ್ಕೂ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಲಿವೆ ಎಂದರು.
ಎಲೆಚುಕ್ಕಿ ರೋಗ ಬಾಧಿಸಿದ ಅಡಿಕೆ ಮರಕ್ಕೆ ಔಷಧಿ ಸಿಂಪಡಿಸಲು ₹4 ಕೋಟಿ ಬಿಡುಗಡೆ ಮಾಡಿದ್ದು, ಇನ್ನೂ ₹15 ಕೋಟಿ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದೆ ಇರಿಸಲಾಗಿದೆ ಎಂದರು.
ಬಾಧಿತ ತೋಟಗಳ ಕೃಷಿಕರಿಗೆ ಪರಿಹಾರ ನೀಡುವುದರ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇವೆ. ರೋಗ ಪ್ರತಿರೋಧಕ ಶಕ್ತಿ ಇರುವ ಅಡಿಕೆ ತಳಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.
ಹಳದಿ, ಎಲೆಚುಕ್ಕಿ ರೋಗ ಬಾಧಿಸಿ ಅಡಿಕೆ ಕೃಷಿಕರಿಗೆ ಭಾರಿ ದೊಡ್ಡ ನಷ್ಟ ಉಂಟಾಗಿದೆ. ಕನಿಷ್ಠ 40 ವರ್ಷಗಳ ಕಾಲ ಫಸಲು ಕೊಡಬೇಕಾದ ಅಡಿಕೆ ಮರಗಳು ಕಣ್ಣೆದುರೇ ನಾಶವಾಗಿ ಹೋಗುತ್ತಿರುವುದು ದೊಡ್ಡ ಅನ್ಯಾಯ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನ ನಡೆಸಲಿದೆ ಎಂದರು.
ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾಮ ಪಂಚಾ
ಯಿತಿ ಅಧ್ಯಕ್ಷೆ ಪವಿತ್ರಾ ಗುಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.