ADVERTISEMENT

ಬಂಟ್ವಾಳ: ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಮಹಾಸಭೆ: ₹ 1.05 ಕೋಟಿ ಲಾಭ, ಶೇ 11 ಡಿವಿಡೆಂಡ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 14:09 IST
Last Updated 14 ಸೆಪ್ಟೆಂಬರ್ 2024, 14:09 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಶನಿವಾರ ನಡೆದ ಭೂ ಅಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್‌ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಮಾತನಾಡಿದರು
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಶನಿವಾರ ನಡೆದ ಭೂ ಅಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್‌ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಮಾತನಾಡಿದರು   

ಬಂಟ್ವಾಳ: ಇಲ್ಲಿನ ಭೂ ಅಭಿವೃದ್ಧಿ ಬ್ಯಾಂಕ್‌ ವತಿಯಿಂದ ಬಿ.ಸಿ.ರೋಡು ಗೀತಾಂಜಲಿ ಸಭಾಂಗಣದಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದದರು.

ಬ್ಯಾಂಕ್‌ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಅವರು ಮಾತನಾಡಿ, ‘ಸುಮಾರು 62 ವರ್ಷಗಳ ಹಿನ್ನೆಲೆ ಹೊಂದಿರುವ ಈ ಬ್ಯಾಂಕ್‌ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ₹ 1.05 ಕೋಟಿ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ 11 ಡಿವಿಡೆಂಡ್ ನೀಡುತ್ತಿರುವುದು ಸಾರ್ವಕಾಲಿಕ ದಾಖಲೆ’ ಎಂದು ಹೇಳಿದರು.

ಇದೇ ವೇಳೆ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಮಧ್ಯೆ ಪ್ರವೇಶಿಸಿ, ‘ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ‘ಅಸಲು ಪಾವತಿಸಿದವರಿಗೆ ಬಡ್ಡಿ ಮನ್ನಾ’ ಯೋಜನೆಯಡಿ ನೀಡಿದ ₹ 73 ಲಕ್ಷ ಮೊತ್ತದ ಅನುದಾನವೇ ಲಾಭ ಗಳಿಸಲು ಮುಖ್ಯ ಕಾರಣ’ ಎಂದರು.

ADVERTISEMENT

ಸಭೆಯಲ್ಲಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಎದ್ದು ನಿಂತು, ‘ಭೂ ಅಭಿವೃದ್ಧಿ ಬ್ಯಾಂಕ್‌ಗೆ ಸ್ವಂತ ಕಟ್ಟಡ ನಿರ್ಮಿಸಿ ಲಕ್ಷಾಂತರ ರೂಪಾಯಿ ಮೊತ್ತದ ಆದಾಯ ಬರುವಂತೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ಇದಕ್ಕೆ ಮಾಜಿ ನಿರ್ದೇಶಕ ಚಂದ್ರಪ್ರಕಾಶ ಶೆಟ್ಟಿ ಮೊದಲಾದವರು ಧ್ವನಿಗೂಡಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಸಹಿತ ಬಿಜೆಪಿ ಸದಸ್ಯರು ಆಕ್ಷೇಪಿಸಿ, ಬ್ಯಾಂಕ್‌ನ ವಾರ್ಷಿಕ ವರದಿ ವಾಚಿಸಲು ಅವಕಾಶ ನೀಡಿದ ಬಳಿಕ ಮಾತನಾಡಿ ಎಂದರು.

ಇದೇ ವೇಳೆ ಬ್ಯಾಂಕ್‌ನ ಲಾಭಾಂಶ ಮತ್ತು ಮೀಸಲಾತಿಗೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಪರಸ್ಪರ ವಾಗ್ವಾದ ಮತ್ತು ತಳ್ಳಾಟ ನಡೆದು ಬಳಿಕ ಸಭೆ ಮುಕ್ತಾಯಗೊಂಡಿತು.

ನಿರ್ದೇಶಕರಾದ ಲಿಂಗಪ್ಪ ಪೂಜಾರಿ, ಸಂಜೀವ ಪೂಜಾರಿ ಮೆಲ್ಕಾರ್, ಚಂದ್ರಹಾಸ ಕರ್ಕೇರ, ಲೋಲಾಕ್ಷಿ, ವಿಜಯಾನಂದ, ಲತಾ, ಸುಂದರ ಪೂಜಾರಿ, ಹೊನ್ನಪ್ಪ ನಾಯ್ಕ ಭಾಗವಹಿಸಿದ್ದರು.

ಬ್ಯಾಂಕ್‌ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ ಸ್ವಾಗತಿಸಿ, ನಿರ್ದೇಶಕ ರಾಜೇಶ ಕುಮಾರ್ ವಂದಿಸಿದರು. ವ್ಯವಸ್ಥಾಪಕ ಪದ್ಮನಾಭ ಜಿ.ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.