ADVERTISEMENT

ಮಂಗಳೂರು: ತ್ರಿಶಂಕು ಸ್ಥಿತಿಯಲ್ಲಿ ಕುಳಾಯಿ ಮೀನುಗಾರಿಕಾ ಬಂದರು

ಸರ್ವ ಋತು ಬಳಕೆಗೆ ಸೂಕ್ತವಾಗಿಲ್ಲ ಬಂದರಿನ ವಿನ್ಯಾಸ– ಮೀನುಗಾರರ ಆರೋಪ, ಬ್ರೇಕ್‌ ವಾಟರ್‌ ಉದ್ದ ಹೆಚ್ಚಿಸಲು ಆಗ್ರಹ

ಪ್ರವೀಣ ಕುಮಾರ್ ಪಿ.ವಿ.
Published 4 ನವೆಂಬರ್ 2024, 6:42 IST
Last Updated 4 ನವೆಂಬರ್ 2024, 6:42 IST
<div class="paragraphs"><p>&nbsp;ಕುಳಾಯಿ ಮೀನುಗಾರಿಕಾ ಬಂದರಿನ ಬ್ರೇಕ್ ವಾಟರ್‌ ಕಾಮಗಾರಿ </p></div>

 ಕುಳಾಯಿ ಮೀನುಗಾರಿಕಾ ಬಂದರಿನ ಬ್ರೇಕ್ ವಾಟರ್‌ ಕಾಮಗಾರಿ

   

-ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಮಂಗಳೂರು: ನವಮಂಗಳೂರು ಬಂದರು ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಟ್ಟ ಮೀನುಗಾರರಿಗೆ ಪ್ರತ್ಯೇಕ ಮೀನುಗಾರಿಕಾ ಬಂದರು ನಿರ್ಮಿಸಬೇಕು ಎಂಬುದು ಐದು ದಶಕಗಳಿಗಿಂತಲೂ ಹಳೆಯ ಬೇಡಿಕೆ. ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮುಂದಾದಾಗ ಮೀನುಗಾರರು, ಅದರಲ್ಲೂ ನಾಡ ದೋಣಿ ಮೀನುಗಾರರು ಸಂತಸಪಟ್ಟಿದ್ದರು. ಈ ಬಂದರು ಮೀನುಗಾರರಿಗೆ ಅನುಕೂಲವಾಗುವಂತೆ ನಿರ್ಮಾಣವಾಗುತ್ತಿಲ್ಲ ಎಂಬುದು ಮನದಟ್ಟಾಗುತ್ತಿದ್ದಂತೆಯೇ ಮೀನುಗಾರರೇ ಒಟ್ಟಾಗಿ, ಕಾಮಗಾರಿ ನಿಲ್ಲಿಸುವಂತೆ ಒತ್ತಡ ಹೇರಿದ್ದಾರೆ.

ADVERTISEMENT

ನಾಡದೋಣಿ ಮೀನುಗಾರಿಕೆ ಆದ್ಯತೆ ಸಿಗುವಂತೆ ಇಲ್ಲಿ ಸರ್ವಋತು ಬಂದರು ನಿರ್ಮಾಣವಾಗಬೇಕು. ಉತ್ತರದ ಬ್ರೇಕ್ ವಾಟರ್‌ನ ಉದ್ದವನ್ನು 1,081 ಮೀಟರ್‌ಗೆ ಹಾಗೂ ದಕ್ಷಿಣದ ಬ್ರೇಕ್ ವಾಟರ್ ಉದ್ದವನ್ನು 981 ಮೀಟರ್‌ಗೆ ವಿಸ್ತರಿಸಿ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಬೇಕು ಎಂಬುದು ಸ್ಥಳೀಯ ಮೀನುಗಾರರ ಬೇಡಿಕೆ. ‘ಬಂದರು ನಿರ್ಮಿಸುವುದಾದರೆ ಮೀನುಗಾರರ ಬೇಡಿಕೆ ಪ್ರಕಾರವೇ ನಿರ್ಮಿಸಿ. ಇಲ್ಲವಾದರೆ ಕಾಮಗಾರಿ ನಿಲ್ಲಿಸಿ’ ಎಂದು ಮೀನುಗಾರರು ಖಡಾಖಂಡಿತವಾಗಿ ತಿಳಿಸಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಈಚೆಗೆ ಪ್ರತಿಭಟನೆಯನ್ನು ನಡೆಸಿದ್ದಾರೆ. ಮೀನುಗಾರರ ಒತ್ತಡಕ್ಕೆ ಮಣಿದು ಎನ್‌ಎಂಪಿಎ ಮೂರು ವಾರಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದು, ಕುಳಾಯಿ ಬಂದರಿನ ಭವಿಷ್ಯ ತ್ರಿಶಂಕು ಸ್ಥಿತಿಯನ್ನು ತಲುಪಿದೆ. 

ವಿರೋಧವೇಕೆ?: ಪ್ರಸ್ತುತ ಕುಳಾಯಿಯಲ್ಲಿ ನಿರ್ಮಿಸುತ್ತಿರುವ ಬ್ರೇಕ್‌ ವಾಟರ್‌ಗಳ (ಅಲೆ ನಿರೋಧಕ) ಉದ್ದ ಏನೇನೂ ಸಾಲದು. ಇಲ್ಲಿ ಮೇನಿಂದ ಸೆಪ್ಟೆಂಬರ್‌ವರೆಗೆ ಕಿನಾರೆಯಿಂದ ಸುಮಾರು 600– 800 ಮಿ ದೂರದವರೆಗೂ  ಸಮುದ್ರದಲ್ಲಿ ಅಲೆಗಳ ಅಬ್ಬರ ಇರುತ್ತದೆ. ಕೇವಲ 262 ಮೀ ಉದ್ದದ ಬ್ರೇಕ್‌ ವಾಟರ್‌ ನಿರ್ಮಿಸಿದರೆ ಅದರಿಂದ ಅಲೆಗಳ ಆರ್ಭಟ ತಡೆಯಲಾಗದು ಎನ್ನುತ್ತಾರೆ ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ಥ್ ಕಾಂಚನ್‌.

‘ಪ್ರಾಧಿಕಾರವು ಮೀನುಗಾರಿಕಾ ಬಂದರು ನಿರ್ಮಿಸುವಾಗ ನಾಡದೋಣಿ ಮೀನುಗಾರರಿಗೆ ಆದ್ಯತೆ ಸಿಗಬೇಕು. ನಾವು ಮತ್ತೆ ನವಮಂಗಳೂರು ಬಂದರಿನಲ್ಲಿ ದೋಣಿ ನಿಲ್ಲಿಸುವ ಪ್ರಮೇಯ ಎದುರಾಗಬಾರದು. ಸುರಕ್ಷತೆ ದೃಷ್ಟಿಯಿಂದಲೂ ಇದು ಸೂಕ್ತವಲ್ಲ. ಆದರೆ ಕುಳಾಯಿ ಬಂದರಿನ ಈಗಿನ ವಿನ್ಯಾಸದ ಪ್ರಕಾರ ನಾಡದೋಣಿ ಮೀನುಗಾರರಿಗೆ ಏನೇನೂ ಪ್ರಯೋಜನವಾಗದು. ನಮಗೆ ಹೆಚ್ಚು ಮೀನು ಸಿಗುವುದು ಮೇ–ಸೆಪ್ಟೆಂಬರ್‌ ಅವಧಿಯಲ್ಲಿ. ಈ ಅವಧಿಯಲ್ಲೂ ನಾಡದೋಣಿ  ಮೀನುಗಾರಿಕೆ ನಿರಾತಂಕವಾಗಿ ನಡೆಸಲು  ಬಂದರಿನ ವಿನ್ಯಾಸ ಮಾರ್ಪಾಡು ಮಾಡಬೇಕು’ ಎಂದು ಅವರು ಒತ್ತಾಯಿಸಿದರು. 

‘ಮೀನುಗಾರ ಸಮುದಾಯವನ್ನು ಕತ್ತಲಿನಲ್ಲಿಟ್ಟು ಕುಳಾಯಿ ಬಂದರನ್ನು ನಿರ್ಮಿಸಲಾಗುತ್ತಿದೆ. ಸ್ಥಳಿಯ ಮೀನುಗಾರರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಹಾಗಾಗಿ ಇಂತಹ ಪರಿಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ.

ಮೀನುಗಾರರ ಪ್ರತಿಭಟನೆ ಬಳಿಕ ಎಚ್ಚೆತ್ತ ಎನ್ಎಂಪಿಎ ಅಧ್ಯಕ್ಷ ಎ.ವಿ.ರಮಣ ಮೀನುಗಾರರ ಜೊತೆ ಈಚೆಗೆ ಸಭೆ ನಡೆಸಿದ್ದಾರೆ. ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ, ಸ್ಥಳೀಯ ಶಾಸಕ ಭರತ್ ವೈ.ಶೆಟ್ಟಿ ಮತ್ತು ಉಡುಪಿ ಶಾಸಕ ಹಾಗೂ ಮೀನುಗಾರರ ಮುಖಂಡ ಯಶಪಾಲ್ ಸುವರ್ಣ  ಹಾಜರಿದ್ದು ಮೀನುಗಾರರ ಅಸಮಾಧಾನ ತಣಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮೀನುಗಾರರು  ಪಟ್ಟು ಸಡಿಲಿಸಿಲ್ಲ.

ಬ್ರೇಕ್‌ ವಾಟರ್‌ ಕಾಮಗಾರಿಯನ್ನು ದಿಢೀರ್‌ ಸ್ಥಗಿತಗೊಳಿಸಿ, ಅಲ್ಲಿ ಅಳವಡಿಸಿರುವ ಪರಿಕರಗಳನ್ನು ದೀರ್ಘ ಕಾಲ ಹಾಗೆಯೇ ಬಿಟ್ಟರೆ ಉತ್ತರದ ಬ್ರೇಕ್‌ ವಾಟರ್‌ನ ಪಶ್ಚಿಮದ ಚಾಚುವಿನಲ್ಲಿ ಅಳವಡಿಸಿರುವ ಮುಖ್ಯ ಪದರ (ಕೋರ್‌ ಲೇಯರ್‌) ಸ್ಥಳಾಂತರಗೊಳ್ಳಬಹುದು. ಅದಕ್ಕೆ ಯಾವುದೇ ರಕ್ಷಾ ಕವಚಗಳ ಆಸರೆ ಇಲ್ಲ. ನೀರಿನ ಪ್ರವಾಹದ ಒತ್ತಡ ಹಾಗೂ ಅಲೆಗಳ ಅಬ್ಬರವನ್ನು ತಾಳಿಕೊಳ್ಳುವಷ್ಟು ಸಾಮರ್ಥ್ಯ ಅದಕ್ಕಿಲ್ಲ  ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರೀಯ ಕರಾವಳಿ ಮೀನುಗಾರಿಕಾ ಎಂಜಿನಿಯರಿಂಗ್‌  ಸಂಸ್ಥೆ (ಸಿಐಸಿಇಎಫ್‌), ಪುಣೆಯ ಕೇಂದ್ರೀಯ ಜಲ ಮತ್ತು ವಿದ್ಯುತ್‌ ಸಂಶೋಧನಾ ಕೇಂದ್ರ (ಸಿಡಬ್ಲ್ಯುಪಿಆರ್‌ಎಸ್‌) , ತೃತೀಯ ತಪಾಸಣಾ ಸಂಸ್ಥೆ ಎನ್‌ಐಟಿಕೆ ಸುರತ್ಕಲ್ ಮತ್ತು ಯೋಜನೆ ನಿರ್ವಹಣೆ ಸಲಹಾ ಸಂಸ್ಥೆ (ಪಿಎಂಸಿ) ತಜ್ಞರು ಹೇಳಿದ್ದರು. ಅವರ ಮಾತಿಗೂ ಮೀನುಗಾರರು ಕಿವಿಗೊಟ್ಟಿಲ್ಲ.    

ಪುಣೆಯ ಸಿಡಬ್ಲ್ಯುಪಿಆರ್‌ಎಸ್‌ ಇಲ್ಲಿನ ಸಾಗರ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳ ಅಧ್ಯಯನ ನಡೆಸಿತ್ತು. ಬಂದರಿನ ನಾನಾ ಮಾದರಿಗಳನ್ನು ರೂಪಿಸಿ ಅದರ ಶಿಫಾರಸಿನಂತೆ ಕೇಂದ್ರೀಯ ಕರಾವಳಿ ಮೀನುಗಾರಿಕಾ ಎಂಜಿನಿಯರಿಂಗ್‌  ಸಂಸ್ಥೆ (ಸಿಐಸಿಇಎಫ್‌) ಈ ಬಂದರಿನ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಿತ್ತು.  ರಾಜ್ಯ ಸರ್ಕಾರ ಸಲ್ಲಿಸಿರುವ  ಪ್ರಸ್ತಾವನೆ ಪ್ರಕಾರ ₹ 196.51 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಕಾಮಗಾರಿಯನ್ನು ಎನ್‌ಎಂಪಿಎ ಕೈಗೆತ್ತಿಕೊಂಡಿದೆ.  ಸುರತ್ಕಲ್‌ನ ಎನ್‌ಐಟಿಕೆ ತಟಸ್ಥ ಸಂಸ್ಥೆಯಾಗಿ ಈ ಯೋಜನೆಗೆ  ಅಗತ್ಯ ತಾಂತ್ರಿಕ ಸಲಹೆಯನ್ನು ಒದಗಿಸುತ್ತಿದೆ. ಮೆ| ಎಸ್‌ಎಪಿಎಲ್‌ ಜಿಸಿಸಿ ಜಾಯಿಂಟ್ ವೆಂಚರ್‌ ಸಂಸ್ಥೆಗೆ ಇದರ ಕಾಮಗಾರಿ ವಹಿಸಲಾಗಿದೆ.

ಕುಳಾಯಿ ಬಂದರು–ಕಾಮಗಾರಿ ಪ್ರಗತಿ ಎಷ್ಟು?

ಕುಳಾಯಿಯಲ್ಲಿ ಎರಡು ಬ್ರೇಕ್ ವಾಟರ್‌ಗಳು ನಿರ್ಮಾಣವನ್ನು ₹ 147 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದೆ. ಅಲೆ ನಿರೋಧಕ ವ್ಯವಸ್ಥೆಯು (ಬ್ರೇಕ್‌ ವಾಟರ್‌) ಶೋಧಕ ಪದರ (ಫಿಲ್ಟರ್‌ ಲೇಯರ್‌) ಮುಖ್ಯ ಪದರ (ಕೋರ್‌ ಲೇಯರ್‌) ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಕ್ಷಾ ಕವಚಗಳು (ಆರ್ಮರ್‌)/ ಚಥುಷ್ಪಾದದ ಕಾಂಕ್ರೀಟ್‌ ರಚನೆಗಳು (ಟೆಟ್ರಾಪಾಡ್‌ಗಳು) ಇವೆ. ಬಂದರಿನ ದಕ್ಷಿಣ ದಿಕ್ಕಿನ ಬ್ರೇಕ್ ವಾಟರ್ ಬಹುತೇಕ ಸಂಪೂರ್ಣವಾಗಿದೆ. ಇಲ್ಲಿ ಬಂದರಿಗೆ ಸಂಪೂರ್ಣ ರಕ್ಷಣೆ ಸಿಗಲಿದೆ. ಉತ್ತರ ದಿಕ್ಕಿನ ಬ್ರೇಕ್‌ವಾಟರ್ನಲ್ಲಿ 300 ಮೀ. ನಷ್ಟು ಪೂರ್ಣಗೊಂಡಿದೆ. ಇದಕ್ಕೆ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಕ್ಷ ಕವಚಗಳು ಮುಖ್ಯ ಪದರ (ಕೋರ್‌ ಲೇಯರ್‌) ದಿಬ್ಬದ ಪಾದದ ರಚನೆ / ಟೆಟ್ರಾಪಾಡ್‌ಗಳ ರಕ್ಷಣೆಯನ್ನೂ ಒದಗಿಸಲಾಗಿದೆ. 300 ಮೀ ನಿಂದ 510 ಮೀ ವರಗೆ ಫಿಲ್ಟರ್ ಪದರ ಮುಖ್ಯ ಪದರವನ್ನು ಅಳವಡಿಸುವ ಕೆಲಸ ಮಾತ್ರ ನಡೆದಿದೆ.  ಇಲ್ಲಿಗೆ ಇದಕ್ಕೆ ಪ್ರಾಥಮಿಕ ಮತ್ತು ದ್ವಿತೀಯ ಹಂತಗಳ ರಕ್ಷ ಕವಚಗಳು ಮುಖ್ಯ ಪದರ (ಕೋರ್‌ ಲೇಯರ್‌) ದಿಬ್ಬದ ಪಾದದ ರಚನೆ / ಟೆಟ್ರಾಪಾಡ್‌ಗಳ ರಕ್ಷಣೆಯನ್ನು ಇನ್ನಷ್ಟೇ ಒದಗಿಸಬೇಕಿದೆ.

ಅಲೆಗಳ ಅಬ್ಬರಕ್ಕೆ ಹಾನಿಗೊಂಡ ಬ್ರೇಕ್‌ವಾಟರ್‌

ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಉತ್ತರದ ಬ್ರೇಕ್‌ವಾಟರ್‌ನ ಪಶ್ಚಿಮ ದಿಕ್ಕಿನ ಚಾಚು ಮಳೆಗಾಲದಲ್ಲಿ ಅಲೆಗಳ ಅಬ್ಬರಕ್ಕೆ ಹಾನಿಗೊಳಗಾಗಿದೆ.  ‘ಮುಂಗಾರು ಶುರುವಾಗುವುದಕ್ಕೆ ಮುನ್ನವೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೂ ಬ್ರೇಕ್‌ವಾಟರ್ ಹಾನಿಗೊಂಡಿದೆ.  ಮೊದಲೇ ಅಂತಿಮಗೊಳಿಸಲಾದ ವಿನ್ಯಾಸಕ್ಕೆ ಅನುಗುಣವಾಗಿಯೇ ಅದನ್ನು ಸ್ವಂತ ಖರ್ಚಿನಲ್ಲಿ ಮತ್ತೆ ದುರಸ್ತಿಗೊಳಿಸಲು ಹಾಗೂ ಒಪ್ಪಂದದಲ್ಲಿರುವ ಪ್ರಕಾರವೇ ಗುತ್ತಿಗೆದಾರರು ಒಪ್ಪಿದ್ದಾರೆ’ ಎಂದು ಎನ್‌ಎಂಪಿಎ ತಿಳಿಸಿದೆ.

ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ : ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಕುಳಾಯಿ ಮೀನುಗಾರಿಕಾ ಬಂದರಿನ ನೀಲನಕ್ಷೆ
ಮೀನುಗಾರರನ್ನು ವಿಶ್ವಾಸಕ್ಕೆ ಪಡೆದು ಅವರ ಸಲಹೆಯಂತೆ ಕುಳಾಯಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಆದಷ್ಟು ಬೇಗ ಪುನರಾರಂಭ ಮಾಡುತ್ತೇವೆ.
-ಕ್ಯಾ.ಬ್ರಿಜೇಶ್ ಚೌಟ ಸಂಸದ
ನವಮಂಗಳೂರು ಬಂದರಿಗೆ ಜಾಗ ನೀಡಿದ್ದು ಇಲ್ಲಿನ ನಾಡದೋಣಿ ಮೀನುಗಾರರು. ಹಾಗಾಗಿ ನಾಡದೋಣಿ ಮೀನುಗಾರಿಕೆ ನಡೆಸಲು ಯೋಗ್ಯವಾದ ಸರ್ವಋತು ಬಂದರನ್ನು ನಿರ್ಮಿಸಬೇಕು
-ಶರತ್‌ ಬಂಗೇರ ನಾಡದೋಣಿ ಮೀನುಗಾರ ಕುಳಾಯಿ
ಕುಳಾಯಿ ಮೀನುಗಾರಿಕಾ ಬಂದರಿನ ವಿನ್ಯಾಸದಲ್ಲಿ ಅಗತ್ಯ ಮಾರ್ಪಾಡುವ ಮಾಡಲು ಮೀನುಗಾರಿಕಾ ಸಚಿವರು ಕ್ರಮವಹಿಸಬೇಕು. ಈ ಬಂದರು ಹಣ ಪೋಲು ಮಾಡುವ ಸಾಧನವಾಗದೇ ಮೀನುಗಾರರಿಗೆ ಉಪಯೋಗವಾಗಬೇಕು
- ಅಶ್ವತ್ಥ್‌ ಕಾಂಚನ್‌ ದ.ಕ. ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ
ಕುಳಾಯಿ ಬಂದರು ಕಾಮಗಾರಿ ಆರಂಭಿಸುವ ಮುನ್ನವೇ ಮೀನುಗಾರರ ಬೇಕು– ಬೇಡಗಳನ್ನು ಪರಿಗಣಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಮೀನುಗಾರರನ್ನು ವಿಶ್ವಾಸಕ್ಕೆ ಪಡೆದರೆ ಇಂತಹ ಗೊಂದಲ ತಪ್ಪಿಸಬಹುದು.
-ಚೇತನ್ ಬೆಂಗ್ರೆ ದ.ಕ. ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.