ADVERTISEMENT

ಪುತ್ತೂರು: ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಕೆ

ದೇವಸ್ಥಾನಗಳಲ್ಲಿ ಪೂಜೆ, ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2023, 9:04 IST
Last Updated 21 ಏಪ್ರಿಲ್ 2023, 9:04 IST
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಗುರುವಾರ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಗುರುವಾರ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.   

ಪುತ್ತೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗುರುವಾರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಆಶಾ ತಿಮ್ಮಪ್ಪ ಅವರು ಬೆಳಿಗ್ಗೆ ಪುತ್ತೂರಿನ ರಾಘವೇಂದ್ರ ಮಠ, ಲಕ್ಷ್ಮೀವೆಂಕಟರಮಣ ದೇವಳ ಹಾಗೂ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕಿ, ನಟಿ ಶ್ರುತಿ, ಶಾಸಕ ಸಂಜೀವ ಮಠಂದೂರು, ಡಾ.ಎಂ.ಕೆ. ಪ್ರಸಾದ್ ಮೊದಲಾದವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ADVERTISEMENT

ಆರಂಭದಲ್ಲಿ ಕೇಸರಿ ಪೇಟ ಧರಿಸಿದ ಮಹಿಳಾ ಕಾರ್ಯಕರ್ತೆಯರು, ಕೇಸರಿ ಶಲ್ಯ ಧರಿಸಿದ ಸಾವಿರಾರು ಕಾರ್ಯಕರ್ತರು, ಗೊಂಬೆ ಕುಣಿತ, ನಾಸಿಕ್‌ ಬ್ಯಾಂಡ್, ಚೆಂಡೆ ಮೇಳದ ಆಕರ್ಷಣೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಮುಖ್ಯರಸ್ತೆಯ ಮೂಲಕ ಬಸ್ ನಿಲ್ದಾಣದ ಬಳಿಯಾಗಿ ಕೋರ್ಟ್‌ ಮೂಲಕ ಸಾಗಿ ಮೆರವಣಿಗೆಯು ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು.

ಅಭಿವೃದ್ಧಿಯ ಹೊಸ ಶಕೆ ಆರಂಭ: ಕಿಲ್ಲೆ ಮೈದಾನದಲ್ಲಿ ನಡೆದ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ‘ಕರ್ನಾಟದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಪ್ರತಿಯೊಂದೂ ಸ್ಥಾನವೂ ಅತ್ಯಂತ ಮಹತ್ವದ್ದಾಗಿದೆ. ಪಕ್ಷದ ಕಾರ್ಯಕರ್ತರ, ಮತದಾರರ ಒಂದೊಂದು ಮತವೂ ಬಹಳ ಮುಖ್ಯವಾಗಿದೆ. ಮುಂದಿನ 5 ವರ್ಷಗಳ ಕಾಲ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಬೇಕಾದರೆ ಮತದಾರರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕಾಗಿದೆ’ ಎಂದು ಹೇಳಿದರು.

ಅತಂತ್ರ ಸರ್ಕಾರ ಕೊಡಬೇಡಿ: ಬಿಜೆಪಿ ನಾಯಕಿ, ಚಿತ್ರನಟಿ ಶ್ರುತಿ ಮಾತನಾಡಿ, ‘ಪ್ರಜ್ಞಾವಂತ ಮತದಾರರು ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಸರ್ಕಾರ ರಚಿಸುವ ಸ್ಥಿತಿಯನ್ನು ತಂದೊಡ್ಡಬೇಡಿ. ಕೇಂದ್ರದಲ್ಲಿ ಸ್ಥಿರ ಸರ್ಕಾರ ಕೊಟ್ಟ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಸಾಂಗವಾಗಿ ನೆರವೇರಿಸಿಕೊಂಡು ಹೋಗಲು ಮತದಾರರು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಅಧಿಕಾರಕ್ಕೆ ತರಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಆಶಾ ತಿಮ್ಮಪ್ಪ, ಸುಳ್ಯ ಕ್ಷೇತ್ರದ ಬಿಜೆಪಿ
ಅಭ್ಯರ್ಥಿ ಭಾಗೀರಥಿ ಮುರುಳ್ಯ ಮಾತನಾಡಿದರು.

ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಿಜೆಪಿ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರು ರಾಧಾಕೃಷ್ಣ ರೈ, ರಾಜೇಶ್ ಕಾವೇರಿ, ಆರ್.ಸಿ. ನಾರಾಯಣ್, ರಾಮ್ ದಾಸ್ ಬಂಟ್ವಾಳ, ಪಿ.ಜಿ. ಜಗನ್ನಿವಾಸ ರಾವ್ ಇದ್ದರು. ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಬನ್ನೂರು ಮತ್ತು ಚಂದ್ರಶೇಖರ್ ಬಪ್ಪಳಿಕೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.