ADVERTISEMENT

ಉಳ್ಳಾಲ | ಠಾಣೆಯಲ್ಲಿ ಹಲ್ಲೆ: ಆರೋಪಿ ಪೊಲೀಸ್ ವಶಕ್ಕೆ

ಠಾಣೆಗೆ ಮುತ್ತಿಗೆ ಹಾಕಿದ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 13:22 IST
Last Updated 17 ಅಕ್ಟೋಬರ್ 2024, 13:22 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಉಳ್ಳಾಲ (ದಕ್ಷಿಣ ಕನ್ನಡ): ಎರಡು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದ್ದ ವೇಳೆ, ಬಜರಂಗ ದಳದ ಉಳ್ಳಾಲ ನಗರ ಪ್ರಖಂಡದ ಸಂಯೋಜಕ ಅರ್ಜುನ್ ಮಾಡೂರು ಮೇಲೆ ಕೇರಳ ಕಾಸರಗೋಡಿನ ಮಹಮ್ಮದ್ ಆಸಿಫ್ (33) ಹಲ್ಲೆ ನಡೆಸಿದ್ದಾಗಿ ಆರೋಪಿಸಿ, ವಿವಿಧ ಹಿಂದುತ್ವವಾದಿ ಸಂಘಟನೆಗಳ ಮುಖಂಡರು ಬುಧವಾರ ನಡುರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

ADVERTISEMENT

ಘಟನೆಯ ವಿವರ: ತೊಕ್ಕೊಟ್ಟುವಿನ ಮೇಲ್ಸೇತುವೆಯ ಬಳಿ ಬುಧವಾರ ರಾತ್ರಿ ಕುಂಪಲದ ಶರತ್ ಹಾಗೂ ಕೇರಳದ ಇಬ್ರಾಹಿಂ ಖಲೀಲ್, ಮೊಹಮ್ಮದ್ ಆಸಿಫ್ ಸಹೋದರರು ಪ್ರಯಾಣಿಸುತ್ತಿದ್ದ ಕಾರುಗಳ ನಡುವೆ ಅಪಘಾತ ನಡೆದಿದೆ. ಈ ವೇಳೆ ಖಲೀಲ್ ಮತ್ತು ಆಸಿಫ್ ಸೇರಿ ಶರತ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅರ್ಜುನ್ ಮಾಡೂರು, ವಿಜಯ್, ಜಿತೇಶ್ ಮತ್ತಿತರರು ಉಳ್ಳಾಲ ಪೊಲೀಸ್ ಠಾಣೆಗೆ ಬಂದು, ಇನ್‌ಸ್ಪೆಕ್ಟರ್ ಬಳಿ ಚರ್ಚಿಸುತ್ತಿರುವಾಗ ಒಳನುಗ್ಗಿದ ಆರೋಪಿ ಆಸಿಫ್, ಅವಾಚ್ಯ ಪದಗಳಿಂದ ನಿಂದಿಸಿ ಅರ್ಜುನ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಆಸಿಫ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಸಂಬಂಧ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 126 (2) (ಸಂಯಮ ಕಳೆದುಕೊಳ್ಳುವುದು), 352 (ಸಾರ್ವಜನಿಕ ಶಾಂತಿಭಂಗ), 351(2) (ಕ್ರಿಮಿನಲ್ ಬೆದರಿಕೆ), 109(1) (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುತ್ತಿಗೆ: ವಿಷಯ ತಿಳಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಎದುರು ಜಮಾಯಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸಿದ್ದಾರ್ಥ್ ಗೋಯಲ್, ಎಸಿಪಿ ಧನ್ಯಾ ನಾಯಕ್ ಠಾಣೆಯ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದರು.

ಕೆಲಹೊತ್ತಿನಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಕುತ್ತಾರ್ ಹಾಗೂ ನಂತರ ಬಿಜೆಪಿ ಮುಖಂಡ ಅರುಣ್‌ಕುಮಾರ್ ಪುತ್ತಿಲ ಠಾಣೆ ಆವರಣಕ್ಕೆ ಬಂದು ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

‘ಕಾರು ಚಾಲಕರ ನಡುವಿನ ಗಲಾಟೆಯ ಕುರಿತು ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರ ಕೊಠಡಿಯೊಳಗೆ ಮಾತುಕತೆ ನಡೆಯುತ್ತಿದ್ದ ವೇಳೆ, ಬಾಲಕೃಷ್ಣ ಅವರು ಕರೆ ಸ್ವೀಕರಿಸಿ, ಮಾತನಾಡುತ್ತ ಕೊಠಡಿಯಿಂದ ಹೊರ ಹೋಗಿದ್ದಾರೆ. ಈ ವೇಳೆ ಆರೋಪಿ ಆಸಿಫ್ ಒಳನುಗ್ಗಿ ಅರ್ಜುನ್ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸ್ ಠಾಣೆಯಲ್ಲೇ ರಕ್ಷಣೆ ಇಲ್ಲದಂತಾಗಿದೆ’ ಎಂದು ಜಮಾಯಿಸಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.