ADVERTISEMENT

ಪೊಲೀಸರ ಮೇಲೆ ಹಲ್ಲೆ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:55 IST
Last Updated 9 ಮಾರ್ಚ್ 2024, 14:55 IST

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ತೆಂಕಕಾರಂದೂರು ಗ್ರಾಮದ ಪೆರಾಲ್ದಕಟ್ಟೆಯಲ್ಲಿ ಶಿವರಾತ್ರಿಯ ದಿನ ರಾತ್ರಿ ವೇಳೆ ರಸ್ತೆಯಲ್ಲಿ ಸೋಡಾ ಬಾಟಲಿ ಹಾಗೂ ಗಾಜುಗಳನ್ನು ಒಡೆದು ಗಲಾಟೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಮೂವರ ವಿರುದ್ಧ ಹಾಗೂ ಇತರ ಅಪರಿಚಿತರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹೇಶ್, ಸುರೇಶ್, ಅರುಣ್ ಸೇರಿ ಸುಮಾರು ಹತ್ತು ಮಂದಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ವೇಣೂರು ಪೊಲೀಸ್ ಠಾಣೆಯ ಎ.ಎಸ್.ಐ ರಾಮಯ್ಯ ಅವರು, ಯುವಕರ ತಂಡ ರಸ್ತೆಯಲ್ಲಿ ದಾಂದಲೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ. ಗಾಜು ಒಡೆದಿರುವುದನ್ನು ಪ್ರಶ್ನಿಸಿದಾಗ ಸಿಟ್ಟುಗೊಂಡ ತಂಡ ಅವರ ಮೇಲೆ ದಾಳಿ ನಡೆಸಿದೆ‌. ಅವರನ್ನು ನೆಲಕ್ಕೆ ಬೀಳಿಸಿ ತುಳಿದು ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಬಗ್ಗೆ ರಾಮಯ್ಯ ಅವರು ನೀಡಿರುವ ದೂರಿನಂತೆ ವೇಣೂರು ಪೊಲೀಸರು ಪ್ರಕರಣ‌ ದಾಖಲಿಸಿಕೊಂಡಿದ್ದಾರೆ. ರಾಮಯ್ಯ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.