ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಬೆಳ್ತಂಗಡಿ ಕ್ಷೇತ್ರಗಳಲ್ಲಿ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗರ ಗೌಡರ ಸೇವಾ ಸಂಘವು ಪ್ರಮುಖ ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲೋಕಯ್ಯ ಗೌಡ, ‘ಪ್ರಮುಖ ಕೃಷಿಕ ವರ್ಗವಾಗಿರುವ ಒಕ್ಕಲಿಗ ಗೌಡರು ಜಿಲ್ಲೆಯಲ್ಲಿ ಬಹು ಸಂಖ್ಯಾತರಾಗಿದ್ದಾರೆ. ಪುತ್ತೂರು ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು, ಸುಳ್ಯ ತಾಲ್ಲೂಕಿನಲ್ಲಿ ಶೇ 65ರಷ್ಟು ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 45ರಷ್ಟು ಮತದಾರರು ಗೌಡ ಜನಾಂಗದವರು. ಮಂಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 3.5 ಲಕ್ಷದಷ್ಟು ಮತದಾರರು ನಮ್ಮ ಸಮುದಾಯವರು. ಮತದಾರರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುವ ಸಾಮರ್ಥ್ಯ ಹೊಂದಿರುವ ಸಂಖ್ಯಾಬಲವನ್ನು ಪರಿಗಣಿಸದೆ ನಮ್ಮ ಸಮಾಜವನ್ನು ರಾಜಕೀಯವಾಗಿ ಕಡೆಗಣಿಸಲಾಗಿದೆ’ ಎಂದು ಅಸಮಾಧಾನ ತೋಡಿಕೊಂಡರು.
‘ಚುನಾವಣೆಯಲ್ಲಿ ಗೌಡ ಸಮುದಾಯದವರಿಗೆ ಬಹಳ ಕಡಿಮೆ ಅವಕಾಶಗಳು ಸಿಗುತ್ತಿವೆ. ಜಾತಿ ಆಧಾರದಲ್ಲಿ ಸೀಟು ಹಂಚುವ ರಾಜಕೀಯ ಪಕ್ಷಗಳು ಗೌಡ ಸಮಾಜವನ್ನು ಮೊದಲಿನಿಂದಲೂ ಕಡೆಗಣಿಸುತ್ತಲೇ ಬಂದಿವೆ. ಹಾಗಾಗಿ ಜಿಲ್ಲೆಯಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳು ಸರಿಯಾಗಿ ದೊರಕುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಸದಾನಂದ ಗೌಡ ಡಿ.ಪಿ, ಉಪಾಧ್ಯಕ್ಷ ಪದ್ಮನಾಭ ಗೌಡ ದೇವಸ್ಯ, ಕಾರ್ಯದರ್ಶಿ ಕೆ. ರಾಮಣ್ಣ ಗೌಡ ಹಾಗೂ ಸದಸ್ಯ ಗುರುದೇವ್ ಯು.ಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.