ಮಂಗಳೂರು: ಆಷಾಢ (ಆಟಿ) ತಿಂಗಳ ಅಮಾವಾಸ್ಯೆಯನ್ನು ಕರಾವಳಿಯಲ್ಲಿ (ತುಳುನಾಡು) ಸೋಮವಾರ ಶ್ರದ್ಧೆಯಿಂದ ಆಚರಿಸಲಾಯಿತು.
ಪಶ್ಚಿಮ ಘಟ್ಟಗಳ ತಪ್ಪಲಿನ ಈ ಪ್ರದೇಶದಲ್ಲಿ ಆಷಾಢ ತಿಂಗಳಲ್ಲಿ ಭಾರಿ ಮಳೆ.ಕ್ರಿಮಿ- ಕೀಟಬಾಧೆಯಿಂದ ಆರೋಗ್ಯದ ರಕ್ಷಣೆ, ರೋಗ ನಿರೋಧಕತೆಗಾಗಿ ಪಾಲೆ (ಹಾಲೆ) ಮರದ ತೊಗಟೆಯನ್ನು ನಸುಕಿನಲ್ಲೇ ಕಲ್ಲಿನಿಂದ ಜಜ್ಜಿ ತಂದುಕಷಾಯ ಮಾಡಿ ಸೇವಿಸುವುದು ರೂಢಿ.
ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು.
ಹಿಂದಿನ ಕಾಲದಿಂದಲೂ ತುಳುನಾಡಿನಲ್ಲಿ ಆಟಿಯ ಕಷಾಯ ಕುಡಿಯುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಆರೋಗ್ಯ ದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಗರದ ವಿವಿಧೆಡೆ ಆಟಿ ಕಾರ್ಯಕ್ರಮ ಆಯೋಜಿಸುವ ಮೂಲಕ ಪಾಲೆ ಮರದ ಕಷಾಯವನ್ನು ಸೇವಿಸಲಾಗುತ್ತಿದೆ. ಈ ಬಾರಿ ಲಾಕ್ ಡೌನ್ ಪರಿಣಾಮ ಸಾಮೂಹಿಕ ಸೇವನೆ-ವಿತರಣೆ ಕಾರ್ಯಗಳು ನಡೆಯದಿದ್ದರೂ, ಮನೆಗಳಲ್ಲಿಯೇ ಕಷಾಯ ತಯಾರಿಸಿ ಸೇವಿಸಿದರು. ಕಹಿಯಾಗಿರುವ ಪಾಲೆ ಮರದ ಕಷಾಯರೋಗ ನಿರೋಧಕ ಶಕ್ತಿ ಹೊಂದಿದೆ ಎಂಬ ಕಾರಣಕ್ಕೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿತ್ತು.
ಪಾಲೆ ಮರ ಕಷಾಯ ಮಾತ್ರವಲ್ಲದೇ ಪ್ರಕೃತಿದತ್ತವಾಗಿ ಸಿಗುವ, ಹಿತ್ತಲಲ್ಲಿ ಬೆಳೆಯುವ ವಿವಿಧ ಸಸ್ಯ, ಗೆಡ್ಡೆ, ಮೊಗ್ಗು, ಚಿಗುರು, ಕಾಯಿ, ಬೇರುಗಳ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಮಾಡಿ ಸೇವಿಸುತ್ತಾರೆ. ಇದು ಆಷಾಢದ ಕಷ್ಟ ಸಂದರ್ಭಗಳ ಹಾಗೂ ಆರೋಗ್ಯ ರಕ್ಷಣೆಯ ಸಂಕೇತವೂ ಆಗಿದೆ.
ಆಟಿ ಅಮಾವಾಸ್ಯೆಯ ದಿನದಂದು ದ.ಕ. ಜಿಲ್ಲೆಯ ಬಂಟ್ವಾಳದ ಕಾರಿಂಜ, ಪಾಣೆಮಂಗಳೂರು ಸಮೀಪದ ನರಹರಿ ಪರ್ವತ, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಸೇರಿದಂತೆ ಪುಣ್ಯ ಸ್ಥಳಗಳಲ್ಲಿ ತೀರ್ಥಸ್ನಾನ ಮಾಡುವ ಸಂಪ್ರದಾಯವಿದ್ದರೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಬಾರಿ ನಡೆಯಲಿಲ್ಲ. ದೇಗುಲಗಳ ಸುತ್ತ ಬಿಕೋ ಎನ್ನುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.