ADVERTISEMENT

ಅರಣ್ಯಾಧಿಕಾರಿಗಳ ವಿರುದ್ಧ ಜಾತಿನಿಂದನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 16:23 IST
Last Updated 8 ಏಪ್ರಿಲ್ 2022, 16:23 IST

ಉಜಿರೆ: ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಹಾಗೂ ಉಡುಪಿ ಅರಣ್ಯ ಸಂಚಾರಿ ದಳ ವಲಯಾರಣ್ಯಾಧಿಕಾರಿ ಸಂಧ್ಯಾ ವಿರುದ್ಧ ಬೆಳ್ತಂಗಡಿ ತಾಲ್ಲೂಕು ಕಲ್ಮಂಜ ಗ್ರಾಮದ ಐತ ಎಂಬುವವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿದೆ.

ಡಿ.10ರಂದು ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಡಿ.9ರಂದು ಮರಗಳನ್ನು ಕಡಿದು ಹೊರಗಡೆ ದಾಸ್ತಾನು ಮಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ಅವುಗಳನ್ನು ವಶಪಡಿಸಿಕೊಂಡಿದ್ದರು. ಮರುದಿನ ಯಾವುದೇ ನೋಟಿಸ್ ನೀಡದೆ ತಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಅಧಿಕಾರಿಗಳು ತಾಯಿ ಹಾಗೂ ನನ್ನನ್ನು ವಿಚಾರಿಸಿ ಪ್ರಕರಣಗಳನ್ನು ದಾಖಲಿಸುವುದಾಗಿ ತಿಳಿಸಿದ್ದಲ್ಲದೆ, ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ದೊಡ್ಡ ಮೊತ್ತ ನೀಡಲು ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದಾಗ, ಜಾತಿ ನಿಂದನೆ ಮಾಡಿ ಮರಗಳನ್ನು ಡಿಪೊಗೆ ಸಾಗಿಸಿದ್ದಾರೆ ಎಂದು ಐತ ಅವರು ಧರ್ಮಸ್ಥಳ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಇದೀಗ ಹಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಹೊಸ ತಿರುವು: ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗುವುದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ.

ಬಾಲಕೃಷ್ಣ ಶೆಟ್ಟಿ ಎಂಬುವವರ ಬದ್ಯಾರಿನಲ್ಲಿರುವ ಮಿಲ್‌ ಮೇಲೂ ಸಂಧ್ಯಾ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅದರ ಬೆನ್ನಲ್ಲಿಯೇ ಸಂಧ್ಯಾ ಅವರನ್ನು ಬೀದರ್‌ಗೆ ವರ್ಗಾವಣೆ ಮಾಡಲಾಗಿತ್ತು. ಅದಕ್ಕೆ ನ್ಯಾಯಾಲಯದಿಂದ ಅವರು ತಡೆಯಾಜ್ಞೆ ತಂದಿದ್ದರು.

ಇದೀಗ ಘಟನೆ ನಡೆದು ನಾಲ್ಕು ತಿಂಗಳ ಬಳಿಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.