ಉಳ್ಳಾಲ: ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರನ್ನು ಶನಿವಾರ ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಲಾಗಿದೆ.
ಉಳ್ಳಾಲ ನಗರಸಭೆ ಕಚೇರಿ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹಮೀದ್ ಪಿ.ಎಂ. ಇರಿತಕ್ಕೆ ಒಳಗಾದವರು.
ಹಮೀದ್ ಅವರು, ಪಂಜಿಮೊಗರುವಿನಲ್ಲಿ 13 ವರ್ಷಗಳ ಹಿಂದೆ ನಡೆದ ತಾಯಿ ಹಾಗೂ ಮಗಳ ಜೋಡಿ ಕೊಲೆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆಯ ಪತಿ.
ಗಾಯಗೊಂಡ ಹಮೀದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಬಂದರು ಭಾಗದ ಈಜುಪಟುವೊಬ್ಬರು ಈ ಕೃತ್ಯ ಎಸಗಿರುವ ಮಾಹಿತಿ ಇದೆ. ಹಣದ ವಿಚಾರವಾಗಿ ಕೃತ್ಯ ನಡೆದಿರುವ ಸಾಧ್ಯತೆಗಳಿವೆ ಎಂದು ಉಳ್ಳಾಲ ಪೊಲೀಸರು ಸಂದೇಹ ವ್ಯಕ್ತಪಡಿಸಿದರು. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪಂಜಿಮೊಗರಿನಲ್ಲಿ 2011ರ ಜೂ. 28ರಂದು ರಜಿಯಾ ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ ಹತ್ಯೆ ನಡೆದಿತ್ತು. ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಜೋಡಿಕೊಲೆ ಪ್ರಕರಣ ನಡೆದು 13 ವರ್ಷ ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ. ಸಿಐಡಿ ತನಿಖೆ ನಡೆದರೂ ಹಂತಕರು ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.