ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿಯ ಆಳ್ವಾಸ್ ಪದವಿ ಕಾಲೇಜಿಗೆ 2023-24ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ತಿಳಿಸಿದರು.
‘ಮುಂದಿನ 10 ವರ್ಷಗಳ ಅವಧಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯವು ಸ್ವಾಯತ್ತ ಸ್ಥಾನಮಾನ ನೀಡಲು ನಿರ್ಧಾರ ತೆಗೆದುಕೊಂಡಿತ್ತು. ಉನ್ನತ ಶಿಕ್ಷಣ ಇಲಾಖೆಯು ಇದಕ್ಕೆ ಸಹಮತ ಸೂಚಿಸಿ ಆದೇಶ ಹೊರಡಿಸಿದೆ’ ಎಂದು ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಯತ್ತ ಸ್ಥಾನಮಾನ ಲಭಿಸಿರುವುದರಿಂದ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಇನ್ನಷ್ಟು ಕಾಲಬದ್ಧ ಹಾಗೂ ಸಂಘಟಿತವಾಗಿ ನಡೆಸಲು ಅವಕಾಶ ಸಿಗಲಿದೆ. ದಾಖಲಾತಿ, ಪರೀಕ್ಷೆ ಹಾಗೂ ಫಲಿತಾಂಶವನ್ನು ಸುಸಜ್ಜಿತವಾಗಿ ನಡೆಸಲು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇನ್ನಷ್ಟು ವೇಗ ನೀಡಲು ಸಾಧ್ಯವಾಗಲಿದೆ. ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಲು, ವೃತ್ತಿಪರ ಕ್ಷೇತ್ರಗಳು, ಉದ್ಯಮ ವಲಯಕ್ಕೆ ಬೇಕಾದ ಕೌಶಲ ಆಧಾರಿತ ತರಬೇತಿ ನೀಡಲು ಈ ಸ್ಥಾನಮಾನದಿಂದ ಅವಕಾಶ ಹೆಚ್ಚಿದೆ’ ಎಂದು ಮೋಹನ ಆಳ್ವ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.