ADVERTISEMENT

ಜಯಂತ ಕಾಯ್ಕಿಣಿಗೆ ಬಾಲವನ ಪ್ರಶಸ್ತಿ

ಅ.10ರಂದು ಕಾರಂತ ಜನ್ಮದಿನೋತ್ಸವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 16:26 IST
Last Updated 20 ಸೆಪ್ಟೆಂಬರ್ 2019, 16:26 IST
 ಸಾಹಿತಿ ಜಯಂತ ಕಾಯ್ಕಿಣಿ
 ಸಾಹಿತಿ ಜಯಂತ ಕಾಯ್ಕಿಣಿ   

ಪುತ್ತೂರು: ಪ್ರತಿಷ್ಠಿತ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ನೀಡಿ ಪುರಸ್ಕರಿಸಲಾಗುವುದು.

ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕಡಲತೀರದ ಭಾರ್ಗವ ಸಾಹಿತಿ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವವನ್ನು ಅಕ್ಟೋಬರ್ 10ರಂದು ಬಾಲವನದಲ್ಲಿ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು.

‘ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ಇಬ್ಬರು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಪತ್ರಕರ್ತರೊಬ್ಬರನ್ನು ಗೌರವಿಸಲಾಗುವುದು. ಕಾರಂತರ ಬಗ್ಗೆ ಮಕ್ಕಳಿಗೆ ಸ್ಪರ್ಧೆ ನಡೆಯಲಿದೆ’ ಎಂದು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದರು.

ADVERTISEMENT

‘ಬಾಲವನದ ಜಿಮ್ ವ್ಯವಸ್ಥೆಯನ್ನು ಸಮರ್ಪಕಗೊಳಿಸಲಾಗುವುದು. ಬಾಲವನದ ಕಾರಂತರ ಮನೆಯನ್ನು ₹30 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದೆ. ವಾಚನಾಲಯ, ಆರ್ಟ್‌ಗ್ಯಾಲೆರಿ , ಸಮಗ್ರ ಅಭಿವೃದ್ಧಿಗೆ ₹1 ಕೋಟಿ ಅನುದಾನ ಬಂದಿದೆ. ಕಾಮಗಾರಿಗಳನ್ನು ಬೆಂಗಳೂರಿನ ಇಂಟ್ಯಾಕ್ ಸಂಸ್ಥೆಗೆ ಗುತ್ತಿಗೆಗೆ ನೀಡಲಾಗಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಹಶೀಲ್ದಾರ್ ಅನಂತಶಂಕರ, ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಯುವಸಬಲೀಕರಣ ಅಧಿಕಾರಿ ಎಂ. ಮಾಮಚ್ಚನ್, ಸರ್ಕಾರಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಪ್ರಭಾರ ಸಿಡಿಪಿಒ ಭಾರತಿ, ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕಿ ರೇಖಾ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಕುಸುಮಾಧರ್, ಪುತ್ತೂರು ಕರ್ನಾಟಕ ಸಂಘ ಅಧ್ಯಕ್ಷ ಬಿ.ಪುರಂದರ ಭಟ್, ರಂಗಕರ್ಮಿ ಐ.ಕೆ.ಬೊಳುವಾರು. ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯಹಾರ್ವಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.