ADVERTISEMENT

ಗಡಿಕನ್ನಡ ಮಕ್ಕಳಿಗೆ ಪ್ರಶಸ್ತಿಯ ಸಂಭ್ರಮ

ಭಾಷೆಗಳ ನಡುವೆ ಜಗಳ ಹುಟ್ಟಿಸುವುದು ಕೆಟ್ಟ ರಾಜಕಾರಣ: ಬಿಳಿಮಲೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 8:22 IST
Last Updated 17 ನವೆಂಬರ್ 2024, 8:22 IST
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಕವಿ ಗೋವಿಂದ ಪೈ ಅವರು ವಾಸಿಸಿದ್ದ ಮನೆಯ ಮುಂದೆ ಗಣ್ಯರ ಜೊತೆ ಸಂಭ್ರಮಿಸಿದರು
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಕವಿ ಗೋವಿಂದ ಪೈ ಅವರು ವಾಸಿಸಿದ್ದ ಮನೆಯ ಮುಂದೆ ಗಣ್ಯರ ಜೊತೆ ಸಂಭ್ರಮಿಸಿದರು   

ಕಾಸರಗೋಡು: ಗಡಿನಾಡು ಕಾಸರಗೋಡು ಮತ್ತು ಗೋವಾದ ಪ್ರತಿಭಾವಂತ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದ ಸಂಭ್ರಮದ ಅಲೆಯಲ್ಲಿ ಮಿಂದು ಪುಳಕಗೊಂಡರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಂಜೇಶ್ವರದ ಹೊಸಬೆಟ್ಟು ಕಲಾಸ್ಪರ್ಶಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎರಡೂ ರಾಜ್ಯಗಳಲ್ಲಿ ಉತ್ತಮ ಅಂಕ ಗಳಿಸಿದ ಕನ್ನಡ ಮಾಧ್ಯಮದ 149 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ನಡುವೆ ಬದುಕುತ್ತಿರುವ ದಕ್ಷಿಣ ಭಾರತೀಯರು ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸದೇ ಇದ್ದರೆ ಎಲ್ಲವೂ ಹಿಂದಿಮಯ ಆಗಲಿದೆ ಎಂದರು.

ADVERTISEMENT

ಭಿನ್ನ ಭಾಷಿಕರ ನಡುವೆ ವೈಮನಸ್ಯ ಮೂಡಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಲೇ ಇದ್ದಾರೆ. ಇದು ಭಾಷೆಗಳ ಕಟ್ಟುವಿಕೆಗೆ ಮಾರಕವಾಗುತ್ತಿದೆ. ರಾಜ್ಯ ಸರ್ಕಾರಗಳು ಗಡಿಭಾಗಗಳ ಭಾಷಾ ಅಲ್ಪಸಂಖ್ಯಾತರ ಹಿತ ಕಾಯಲು ಪ್ರತ್ಯೇಕ ಭಾಷಾ ನಿರ್ದೇಶಕರನ್ನು ನೇಮಿಸಬೇಕು. ಆದರೆ ಹಲವು ರಾಜ್ಯಗಳು ಈ ಬಗ್ಗೆ ಉತ್ಸುಕವಾಗಿಲ್ಲ ಎಂದು ಅವರು ಹೇಳಿದರು.

₹ 1 ಲಕ್ಷ 80 ಸಾವಿರ ಕೋಟಿ ಮೊತ್ತದ ಆಯವ್ಯಯ ಗಾತ್ರ ಹೊಂದಿರುವ ಕೇರಳ ರಾಜ್ಯವು ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡದೇ ಇರುವುದು ಅಕ್ಷಮ್ಯ ಎಂದ ಅವರು ಇದು ಅಲ್ಪಸಂಖ್ಯಾತ ಕನ್ನಡಿಗರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಎಂದರು.

ಮಲಯಾಳಿಗಳೆಂದು ಗುರುತಿಸಿಕೊಳ್ಳುವುದಕ್ಕಿಂತ ಕೇರಳದ ಕನ್ನಡಿಗರು ಎಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ.ಆಶ್ರಫ್ ಹೇಳಿದರು.

ಸಾಹಿತಿ ಜ್ಯೋತಿ ಚೆಳಾಯ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಇಕ್ಬಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ರೆಹಮಾನ್, ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀನ್ ಲವಿನಾ ಮೊಂತೆರೊ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.