ADVERTISEMENT

ಮಂಗಳೂರು: ಆಯುರ್ವೇದ ದಿನಾಚರಣೆ 29ರಂದು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 6:33 IST
Last Updated 27 ಅಕ್ಟೋಬರ್ 2024, 6:33 IST
ಸುದ್ದಿಗೋಷ್ಠಿಯಲ್ಲಿ ಡಾ.ಮಹಮ್ಮದ್ ಇಕ್ಬಾಲ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಮಹಮ್ಮದ್ ಇಕ್ಬಾಲ್ ಮಾತನಾಡಿದರು.   

ಮಂಗಳೂರು: ಧನ್ವಂತರಿ ಜಯಂತಿ ಹಾಗೂ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಇದೇ 29ರಂದು ಆಚರಿಸಲಾಗುತ್ತಿದೆ. ಈ ಸಲುವಾಗಿ, ‘ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ’ ಎಂಬ ಧ್ಯೇಯ ವಾಕ್ಯದೊಂದಿದೆ ಒಂದು ವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಮಹಮ್ಮದ್ ಇಕ್ಬಾಲ್‌ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ನಗರದ ವೆನ್ಲಾಕ್‌ ಆಯುಷ್‌ ಸಂಯುಕ್ತ ಆಸ್ಪತ್ರೆಯಲ್ಲಿ ಇದೇ 29ರಂದು ಆಯುರ್ವೇದ ದಿನಾಚರಣೆ  ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ಶಾಸಕ ವೇದವ್ಯಾಸ್‌ ಕಾಮತ್‌ ಭಾಗವಹಿಸುವರು. ಉಡುಪಿ ಉದ್ಯಾವರದ ಎಸ್‌ಡಿಎಂ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಮಮತಾ ಕೆ.ಪಿ. ವಿಶೇಷ ಉಪನ್ಯಾಸ ನೀಡುವರು ಎಂದರು. 

ಜಿಲ್ಲೆಯ ಎಲ್ಲ ಖಾಸಗಿ ಆಯುರ್ವೇದ ಕಾಲೇಜು ಹಾಗೂ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಇದೇ 29ರಂದು ಉಚಿತ ಚಿಕಿತ್ಸಾ ಶಿಬಿರವೂ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆಯುರ್ವೇದ ಕಷಾಯ ವಿತರಣೆಯೂ ನಡೆಯಲಿದೆ ಎಂದರು.

ADVERTISEMENT

ಮಾಲ್‌ನಲ್ಲಿ ಸೆಲ್ಫಿ ಪಾಯಿಂಟ್‌:

‘ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಸಿಟಿ ಸೆಂಟರ್‌ ಮಾಲ್‌ನಲ್ಲಿ ಅ.29ರಿಂದ ಐದು ದಿನಗಳ ಕಾಲ ಸೆಲ್ಫಿ ಪಾಯಿಂಟ್‌ ಸ್ಥಾಪಿಸಲಿದ್ದೇವೆ.  ಇಲ್ಲಿ ಸೆಲ್ಫಿ ತೆಗೆದು ಅದನ್ನು ayurvedaday.in  ನಲ್ಲಿ ಅಪ್‌ಲೋಡ್‌ ಮಾಡಬಹುದು’ ಎಂದರು.  

ಆಯುರ್ವೇದ ವೈದ್ಯರಾದ ಡಾ.ದೇವದಾಸ ಪುತ್ರನ್, ಡಾ.ಸಚಿನ್ ನಡ್ಕ, ಡಾ.ಗೋಪಾಲಕೃಷ್ಣ ನಾಯಕ್, ಡಾ.ಕೃಷ್ಣ ಎಂ. ಗೋಖಲೆ, ಡಾ. ಆಶಾಜ್ಯೋತಿ ರೈ, ಡಾ.ಜನಾರ್ದನ ಹೆಬ್ಬಾರ್‌ ಭಾಗವಹಿಸಿದ್ದರು.

‘ಉಳ್ಳಾಲ ಪುತ್ತೂರಿನಲ್ಲಿ ಆಯುಷ್‌ ಆಸ್ಪತ್ರೆ’

ಜಿಲ್ಲೆಯ ಉಳ್ಳಾಲ ಹಾಗೂ ಪುತ್ತೂರು ತಾಲ್ಲೂಕುಗಳಲ್ಲಿ 30 ಹಾಸಿಗೆಗಳ ಸಾಮರ್ಥ್ಯದ ಆಯುಷ್‌ ಆಸ್ಪತ್ರೆ ಆರಂಭಿಸಲು ಸಿದ್ಧತೆ ನಡೆದಿದೆ. ಉಳ್ಳಾಲ ತಾಲ್ಲೂಕಿನ ಕೊಣಾಜೆಯಲ್ಲಿ ಜಾಗ ಗುರುತಿಸಲಾಗಿದ್ದು ಇಲಾಖೆಗೆ ಈ ಕುರಿತ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಿದ್ದೇವೆ. ಪುತ್ತೂರಿನಲ್ಲಿ ಇನ್ನಷ್ಟೇ ಜಾಗ ಗುರುತಿಸಬೇಕಿದೆ’ ಎಂದು ಡಾ.ಮಹಮ್ಮದ್‌ ಇಕ್ಬಾಲ್‌ ತಿಳಿಸಿದರು. ‘ನಗರಕ್ಕೆ ಮಂಜೂರಾಗಿರುವ ‘ಕ್ರೀಡಾ ವೈದ್ಯಕೀಯ ಕೇಂದ್ರ’ದ ಡಿಪಿಆರ್‌ ಸಿದ್ಧವಾಗಿದ್ದು ರಾಜ್ಯ ಸರ್ಕಾರದ ಅನುಮೋದನೆ ಪಡೆದ ಬಳಿಕ ಅದನ್ನು ಕೇಂದ್ರಕ್ಕೆಕಳುಹಿಸಲಿದ್ದೇವೆ. ಆಯುಷ್ಮಾನ್‌ ಭಾರತ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಏಳು ವೆಲ್‌ನೆಸ್‌ ಕೇಂದ್ರಗಳನ್ನು ಆರೋಗ್ಯಮಂದಿರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಇವುಗಳಲ್ಲಿ ನಾಲ್ಕು ಕೇಂದ್ರಗಳಿಗೆ ರಾಷ್ಟ್ರೀಯ ಮಾನ್ಯತೆ ಲಭಿಸಿದೆ. ಉಳಿದವುಗಳಿಗೂ ಈ ಮಾನ್ಯತೆ ಪಡೆಯುವ ಪ್ರಯತ್ನ ನಡೆದಿದೆ’ ಎಂದರು.

‘ಆಯುಷ್‌ ಆಸ್ಪತ್ರೆಯಲ್ಲಿ ಕ್ಷಾರ ಚಿಕಿತ್ಸೆ’

‘ನಗರದ ವೆನ್ಲಾಕ್‌ ಆಯುಷ್‌ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಮೂರನೇ ಶುಕ್ರವಾರ ಕ್ಷಾರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಪೈಲ್ಸ್‌ ಪಿಸ್ತೂಲ ಮತ್ತಿತರ ಗುದದ್ವಾರದ ಸಮಸ್ಯೆಗಳಿಗೆ  ತಜ್ಞರಾದ ಪುತ್ತೂರಿನ ಡಾ.ರವಿಶಂಕರ ಪೆರುವಾಜೆ ಮತ್ತು ಡಾ.ಶೋಭಾ ರಾಣಿ ಕ್ಷಾರ ಚಿಕಿತ್ಸೆ ನೀಡಲಿದ್ದಾರೆ’ ಎಂದು ಡಾ.ಮಹಮ್ಮದ್‌ ಇಕ್ಬಾಲ್‌ ತಿಳಿಸಿದರು. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೂರು ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಆರೈಕೆ ಕುರಿತು ವೈದ್ಯಕೀಯ ಸಲಹೆ ಹಾಗೂ ಆರೈಕೆ ನೀಡಲು ವಿದ್ಯಾರ್ಥಿ ಚೇತನ ಕಾರ್ಯಕ್ರಮ ಆರಂಭಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.