ಮಂಗಳೂರು: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆಯುಷ್ ತಾಲ್ಲೂಕು ಆಸ್ಪತ್ರೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಹೇಳಿದರು.
‘ಪ್ರಜಾವಾಣಿ’ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸಾರ್ವಜನಿಕರು ಕರೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಕೊಣಾಜೆಯಲ್ಲಿ ಆಯುಷ್ ಇಲಾಖೆಗೆ ಸೇರಿದ ನಿವೇಶನ ಇದ್ದು, ಇಲ್ಲಿಯೂ ಆಸ್ಪತ್ರೆ ತೆರೆಯುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಮಂಜೂರು ಆಗುವ ಭರವಸೆ ಇದೆ. ರಾಷ್ಟ್ರೀಯ ಹೆಲ್ತ್ ಮಿಷನ್ ಅಡಿಯಲ್ಲಿ ಜಿಲ್ಲೆಯ 10 ಕಡೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಒಬ್ಬರು ಆಯುಷ್ ವೈದ್ಯರು ಲಭ್ಯರಿರುತ್ತಾರೆ ಎಂದರು.
ಸಾರ್ವಜನಿಕರು ಕೇಳಿದ ಪ್ರಶ್ನೆ ಮತ್ತು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಮತ್ತು ಜೋಕಟ್ಟೆ ಆಯುಷ್ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಅಜಿತನಾಥ ಇಂದ್ರ ಅವರು ನೀಡಿದ ಉತ್ತರದ ಆಯ್ದ ಭಾಗ ಇಲ್ಲಿದೆ.
ರವೀಂದ್ರರಾಜ್ ಉಳ್ಳಾಲ
* ಮಂಗಳೂರಿನ ವೆನ್ಲಾಕ್ ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯಲ್ಲಿ ಸಿದ್ಧ ಚಿಕಿತ್ಸಾ ವಿಭಾಗ ಯಾವಾಗ ಆರಂಭವಾಗುತ್ತದೆ?
* ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ, ಯುನಾನಿ, ಹೋಮಿಯೊಪಥಿ, ಇಎನ್‌ಟಿ, ಫಿಸಿಯೊಥೆರಪಿ ಮೊದಲಾದ ವಿಭಾಗಗಳು ಇವೆ. ಆದರೆ, ಸಿದ್ಧ ಚಿಕಿತ್ಸಾ ಪದ್ಧತಿಗೆ ಅಧಿಕೃತ ಹುದ್ದೆ ಮಂಜೂರು ಇಲ್ಲ. ಕರ್ನಾಟಕದಲ್ಲಿ ಸಿದ್ಧ ಚಿಕಿತ್ಸಾ ಪದ್ಧತಿ ತಮಿಳುನಾಡಿನಷ್ಟು ಪ್ರಚಲಿತದಲ್ಲಿ ಇಲ್ಲ. ಇಲ್ಲಿ ಸಿದ್ಧ ಕಾಲೇಜುಗಳು ಕೂಡ ಕಡಿಮೆ ಇದ್ದು, ನೋಂದಾಯಿತ ವೈದ್ಯರ ಸಂಖ್ಯೆ ಬೆರಳೆಣಿಕೆಯಷ್ಟು ಇರಬಹುದು.
ಶ್ಯಾಮಕುಮಾರ್
* ದೇಹದಲ್ಲಿ ಗಡ್ಡೆಗಳು ಇದ್ದರೆ ಅದನ್ನು ಗುಣಪಡಿಸಲು ಆಯುರ್ವೇದದಲ್ಲಿ ಚಿಕಿತ್ಸೆಗಳು ಇವೆಯೇ? ಥೈರಾಯ್ಡ್ ಸಮಸ್ಯೆಯನ್ನು ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಗುಣಪಡಿಸಬಹುದೇ?
* ಗಡ್ಡೆಗಳಲ್ಲಿ ಎರಡು ಮಾದರಿಗಳು ಇರುತ್ತವೆ. ಕ್ಯಾನ್ಸರ್ ಗಡ್ಡೆ ಆಗಿದ್ದರೆ ಅದು ಅಪಾಯಕಾರಿ. ಅದನ್ನು ಶಸ್ತ್ರಚಿಕಿತ್ಸೆ ಮೂಲಕವೇ ತೆಗೆಯಬೇಕಾಗುತ್ತದೆ. ಕ್ಯಾನ್ಸರ್ ಗಡ್ಡೆ ಅಥವಾ ಕ್ಯಾನ್ಸರ್ ಅಲ್ಲದ ಗಡ್ಡೆ ಎಂದು ನಿರ್ಧರಿಸಲು ಬಯಾಪ್ಸಿ ಮಾಡಿಸಬೇಕು. ಕ್ಯಾನ್ಸರ್ ಗಡ್ಡೆಯಾಗಿದ್ದರೆ ತಕ್ಷಣ ಅದನ್ನು ತೆಗೆಯಬೇಕು. ಬೇರೆ ರೀತಿಯ ಗಡ್ಡೆ ಆಗಿದ್ದಲ್ಲಿ ಅದರಿಂದ ಅಪಾಯ ಇಲ್ಲದಿದ್ದರೆ ಸಮಸ್ಯೆ ಇಲ್ಲ. ಸಿಸ್ಟ್ ಆಗಿದ್ದರೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಇಲ್ಲದೆಯೂ ತೆಗೆಯಬಹುದು.
ಥೈರಾಯ್ಡ್‌ನಲ್ಲಿ ಹೈಪೊ ಥೈರಾಯ್ಡಿಸಂ, ಹೈಪರ್ ಥೈರಾಯ್ಡಿಸಂ ಎಂದು ಎರಡು ರೀತಿ ಇವೆ. ಹೈಪೊ ಥೈರಾಯ್ಡಿಸಮ್ ಆರಂಭಿಕ ಹಂತದಲ್ಲಿದ್ದರೆ ಆಯುರ್ವೇದದಲ್ಲಿ ಚಿಕಿತ್ಸೆ ನೀಡಬಹುದು.
ರಾಜೇಶ್ ಕದ್ರಿ, ರಾಕೇಶ್ ಪುತ್ತೂರು
* ಸುಪ್ರಜಾ ಯೋಜನೆ ಮಂಗಳೂರಿನಲ್ಲಿ ಯಾವಾಗ ಆರಂಭವಾಗುತ್ತದೆ?
* ಆರೋಗ್ಯವಂತ ಸಮಾಜ ನಿರ್ಮಿಸಲು ಕೇಂದ್ರ ಸರ್ಕಾರ ರೂಪಿಸಿರುವ ‘ಸುಪ್ರಜಾ’ ಆಯುಷ್– ತಾಯಿ ಮತ್ತು ನವಜಾತ ಶಿಶುಗಳ ಮಧ್ಯಸ್ಥಿಕೆ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರು ಆಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದ್ದು, ಸದ್ಯದಲ್ಲಿ ಅನುಷ್ಠಾನಕ್ಕೆ ಅನುಮೋದನೆ ದೊರೆಯುವ ವಿಶ್ವಾಸ ಇದೆ.
ಮಂಜುಳಾ, ಬಲ್ಮಠ
* ಬೆನ್ನುನೋವು, ಗಂಟು ನೋವಿಗೆ ಆಯುರ್ವೇದದಲ್ಲಿ ಚಿಕಿತ್ಸೆ ಲಭ್ಯವಿದೆಯೇ?
* ಯಾವ ರೀತಿಯ ನೋವು ಎಂದು ಪರೀಕ್ಷಿಸಬೇಕಾಗುತ್ತದೆ. ರುಮಟೈಡ್ ಆರ್ಥ್ರಿಟಿಸ್ ಆಗಿದ್ದರೆ ಅದಕ್ಕೆ ಆರು ತಿಂಗಳಿಂದ ಒಂದು ವರ್ಷದ ಅವಧಿಯ ಚಿಕಿತ್ಸೆ ಅಗತ್ಯವಿರುತ್ತದೆ. ಕಾಯಿಲೆ ಗಂಭೀರವಾಗಿದ್ದರೆ, ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಅನಿಲ್ ಉಜಿರೆ
* ಮಕ್ಕಳಿಗೆ ಗಂಟು ನೋವು ಯಾಕೆ ಬರುತ್ತದೆ?
ಸಹಜವಾದ ರೋಗ ನಿರೋಧಕ ಶಕ್ತಿಯಲ್ಲಿ ವ್ಯತ್ಯಾಸವಾದರೆ, ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಅದರಲ್ಲಿ ರುಮ್ಯಾಟಿಕ್, ರುಮಟೈಡ್ ಎಂದು ಎರಡು ಬಗೆ ಇರುತ್ತದೆ. ಮಗುವನ್ನು ಪರೀಕ್ಷಿಸಿದರೆ ಏನು ಸಮಸ್ಯೆ ಎಂದು ನಿರ್ಧರಿಸಬಹುದು.
ಹರೀಶ್ ಉಪ್ಪಿನಂಗಡಿ
* ಹೋಬಳಿ ಕೇಂದ್ರದಲ್ಲಿ ಆಯುಷ್ ಕೇಂದ್ರಗಳು ಇವೆಯೇ? ಹೋಬಳಿಯಲ್ಲಿ ತೆರೆಯಲು ಸಾಧ್ಯವೇ?
ಹೋಬಳಿ ಕೇಂದ್ರಗಳಲ್ಲಿ ಇಲ್ಲ, ಆದರೆ, ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ಘಟಕಗಳು ಇವೆ. ಬಂಟ್ವಾಳ ತಾಲ್ಲೂಕಿನ ಸಜಿಪಮೂಡ, ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂಥ, ಕಣಿಯೂರು, ಮಂಗಳೂರು ತಾಲ್ಲೂಕಿನ ಜೋಕಟ್ಟೆ, ಗುರುಪುರ, ಬೆಂಗ್ರೆ, ಮೂಲ್ಕಿ ತಾಲ್ಲೂಕಿನ ಕೆರೆಕಾಡು, ಬಳ್ಕುಂಜೆ ಸೇರಿ ಒಟ್ಟು ಒಂಬತ್ತು ಕಡೆಗಳಲ್ಲಿ ಆಯುಷ್ ಇಲಾಖೆಯ ಆಯುಷ್ ಆರೋಗ್ಯ ಮಂದಿರಗಳು ಸಾರ್ವಜನಿಕ ಸೇವೆಗೆ ಲಭ್ಯ ಇವೆ. ಜಿಲ್ಲೆಗೆ ಮೂರು ಮೊಬೈಲ್ ಆಯುಷ್ ಘಟಕಗಳು ಮಂಜೂರು ಆಗಿದ್ದು, ಅವು ಕಾರ್ಯಾರಂಭ ಮಾಡಿದರೆ, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತವೆ.
ಕವಿತಾ ಮೂಡುಬಿದಿರೆ
* ಆಯುಷ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಲಭ್ಯತೆ ಇದೆಯೇ?
ಮಂಗಳೂರಿನ ಆಯುಷ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಪ್ರತಿ ಗುರುವಾರ ಲಭ್ಯ ಇರುತ್ತಾರೆ. ಚರ್ಮರೋಗ ತಜ್ಞರು, ಕಿವಿ, ಗಂಟಲು, ಮೂಗು ತಜ್ಞರು, ಶಸ್ತ್ರಚಿಕಿತ್ಸಾ (ಶಲ್ಯತಂತ್ರ) ತಜ್ಞರು ಕೂಡ ನಿಗದಿತ ದಿನದಂದು ಲಭ್ಯರಾಗುತ್ತಾರೆ.
ಹೆಚ್ಚುವರಿ ಔಷಧಕ್ಕೆ ವಿನಂತಿ
ವೆನ್ಲಾಕ್ ಆಯುಷ್ ಆಸ್ಪತ್ರೆ ಮತ್ತು ಹ್ಯಾಟ್‌ಹಿಲ್‌ನಲ್ಲಿರುವ ಆಯುಷ್ ಆಸ್ಪತ್ರೆ ಸೇರಿ ದಿನಕ್ಕೆ ಸರಾಸರಿ 300 ಹೊರರೋಗಿಗಳು ಬರುತ್ತಾರೆ. ಕೋವಿಡ್ ನಂತರದ ದಿನಗಳಲ್ಲಿ ಆಯುಷ್ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಿದೆ. ಸರ್ಕಾರದಿಂದ ಸಾಕಷ್ಟು ಔಷಧಗಳು ಪೂರೈಕೆಯಾಗುತ್ತಿವೆ. ಆದರೆ ಇಲ್ಲಿ ಬರುವ ರೋಗಿಗಳ ಪ್ರಮಾಣ ಆಧರಿಸಿದರೆ ಇನ್ನೂ ಹೆಚ್ಚು ಔಷಧ ಪೂರೈಸುವ ಬಗ್ಗೆ ಸರ್ಕಾರಕ್ಕೆ ವಿನಂತಿಸಲಾಗಿದೆ. ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ 50 ಹಾಸಿಗೆ ಮತ್ತು ಹ್ಯಾಟ್‌ಹಿಲ್ ಆಸ್ಪತ್ರೆಯ 25 ಹಾಸಿಗೆ ಸೇರಿ ಒಟ್ಟು 75 ಹಾಸಿಗೆಗಳ ಒಳರೋಗಿ ವಿಭಾಗವನ್ನು ನಿರ್ವಹಿಸಲು ಯೋಚಿಸಲಾಗಿದೆ. ಸದ್ಯದಲ್ಲಿ ಇರುವ ಸಿಬ್ಬಂದಿ ಲಭ್ಯತೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಇದನ್ನು ನಿರ್ವಹಿಸಲು ಸಾಧ್ಯವಾಗದು. ಪ್ರಸ್ತುತ 20 ಹಾಸಿಗೆಗಳು ಇವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಹೇಳಿದರು.
ಕಾಯಿಲೆ ಇರುವವರಿಗೆ ಮಾತ್ರ ಚಿಕಿತ್ಸೆ
ಆಯುಷ್ ಆಸ್ಪತ್ರೆಯಲ್ಲಿರುವ ಜಲಚಿಕಿತ್ಸೆ ಘಟಕದಲ್ಲಿ ಕಾಯಿಲೆ ಇರುವವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಎಂ.ವಿ. ಶೆಟ್ಟಿ ಆಸ್ಪತ್ರೆ ಜೊತೆ ಒಪ್ಪಂದ ಮಾಡಿಕೊಂಡು ಪ್ರತಿದಿನ 30 ರೋಗಿಗಳಿಗೆ ಫಿಸಿಯೊಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಮೊಹಮ್ಮದ್ ಇಕ್ಬಾಲ್ ಹೇಳಿದರು. ‘ಸೃಷ್ಟಿ’ ಯೋಜನೆಯಡಿ ಚಿಕಿತ್ಸೆ ಪಡೆದ ಮೂವರು ದಂಪತಿ ಮಕ್ಕಳನ್ನು ಪಡೆದಿದ್ದಾರೆ. ವಿವಿಧೆಡೆಗಳಲ್ಲಿ ಚಿಕಿತ್ಸೆ ಪಡೆದು ಮಕ್ಕಳಾಗದವರು ಇಲ್ಲಿ ಬರುತ್ತಾರೆ. ಹಾಗೆ ಬರುವಾಗ ಕೆಲವರಿಗೆ ವಯಸ್ಸು ಮೀರಿರುತ್ತದೆ. ಇಲಾಖೆ ಉತ್ತಮ ರೀತಿಯ ಚಿಕಿತ್ಸೆ ನೀಡುತ್ತಿದ್ದು ಪ್ರಸ್ತುತ 47 ದಂಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಹಾರ ಕ್ರಮದ ವ್ಯತ್ಯಾಸ
ಆಧುನಿಕ ಆಹಾರ ಪದ್ಧತಿಯು ರೋಗಗಳಿಗೆ ರಹದಾರಿಯಾಗುತ್ತಿದೆ. ಗಂಟಲು ನೋವು ಬೆನ್ನುನೋವು ಅಸ್ತಮಾ ವಾತ ರೋಗ ಮೂಳೆ ಸವೆತದಂತಹ ಕಾಯಿಲೆಗಳನ್ನು ಹೇಳಿಕೊಂಡು ಆಸ್ಪತ್ರೆಗೆ ಬರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ನಮ್ಮ ಸಾಂಪ್ರದಾಯಿಕ ಆಹಾರ ಕ್ರಮವನ್ನು ಉಳಿಸಿಕೊಂಡರೆ ರೋಗದಿಂದ ದೂರ ಇರಬಹುದು ಎಂದು ಡಾ. ಮೊಹಮ್ಮದ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.