ಮಂಗಳೂರು: ‘ಜೀವನದ ಕಷ್ಟಗಳಿಗೆ ಹಣೆಬರಹವನ್ನು ಹೊಣೆಯಾಗಿಸದೆ, ಶಿಕ್ಷಣದ ಮೂಲಕ ಮಹಾನ್ ಸಾಧನೆ ಮಾಡಬಹುದು ಎಂದು ನಿರೂಪಿಸಿರುವ ಬಾಬು ಜಗಜೀವನರಾಂ ಅವರ ಬದುಕು ಸಾರ್ವಕಾಲಿಕ ಶ್ರೇಷ್ಠತೆ ಹೊಂದಿದೆ’ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗಜೀವನರಾಂ ಅವರ ಬಾಲ್ಯವೇ ಹೋರಾಟವಾಗಿತ್ತು. ಅಸ್ಪೃಶ್ಯತೆ ಆಚರಣೆ ಹೆಚ್ಚಾಗಿದ್ದ ಬಿಹಾರದಂತಹ ರಾಜ್ಯದಲ್ಲಿ ಎದುರಾದ ಅವಮಾನಗಳನ್ನೆಲ್ಲ ಎದುರಿಸಿ, ಹದಿಹರೆಯದಲ್ಲೇ ರಾಜಕೀಯ ಪ್ರವೇಶಿಸಿ 50 ವರ್ಷ ರಾಜಕೀಯದಲ್ಲಿ ತೊಡಗಿಕೊಂಡರು. ಹಸಿರು ಕ್ರಾಂತಿಗೆ ಒತ್ತುಕೊಟ್ಟು ಜನ ಮನದಲ್ಲಿ ಭದ್ರವಾಗಿ ನೆಲೆಯೂರುವ ಜತೆಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಪಡೆದಿದ್ದು, ಅವರ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ‘ಪ್ರಸ್ತುತ ಜಾರಿಯಲ್ಲಿರುವ ಕನಿಷ್ಠ ವೇತನ, ಭವಿಷ್ಯ ನಿಧಿ, ಕಾರ್ಮಿಕ ವಂತಿಗೆ ಯೋಜನೆಗಳನ್ನು ಬಾಬು ಜಗಜೀವನರಾಂ ಅವರು ಅಂದಿನ ಕಾಲದಲ್ಲೇ ಜಾರಿಗೊಳಿಸಿದ್ದರು’ ಎಂದರು.
ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಶಿವಕುಮಾರ್ ಮಗದ ಉಪನ್ಯಾಸ ನೀಡಿದರು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಎಸ್ಪಿ ಋಷಿಕೇಶ್ ಭಗವಾನ್ಸೋನಾವಣೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗೇಶ ಬೇವಿನ ಮಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.