ADVERTISEMENT

ಜಾಮೀನಿಗೆ ಅರ್ಜಿ ಸಲ್ಲಿಸಿದ ತಾಯಿ, ಮಗಳು

ಪಕ್ಷಿಕೆರೆ ಅವಳಿ ಕೊಲೆ, ಆತ್ಮಹತ್ಯೆ ಪ್ರಕರಣ, ಜಾಮೀನು ಅರ್ಜಿ ವಿಚಾರಣೆ 16ಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 6:01 IST
Last Updated 15 ನವೆಂಬರ್ 2024, 6:01 IST
ಪಕ್ಷಿಕೆರೆಯಲ್ಲಿ ಜನರ್ಧನ ಭಟ್‌ ನಡೆಸುತ್ತಿದ್ದ ಹೋಟೆಲ್‌
ಪಕ್ಷಿಕೆರೆಯಲ್ಲಿ ಜನರ್ಧನ ಭಟ್‌ ನಡೆಸುತ್ತಿದ್ದ ಹೋಟೆಲ್‌   

ಮಂಗಳೂರು/ ಮೂಲ್ಕಿ: ಪಕ್ಷಿಕೆರೆಯಲ್ಲಿ ಕಾರ್ತಿಕ ಭಟ್‌ ತನ್ನ ಪತ್ನಿ ಪ್ರಿಯಾಂಕಾ ಹಾಗೂ ಮಗು ಹೃದಯ್‌ನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಂಧಿತರಾಗಿರುವ ಆತನ ತಾಯಿ ಶ್ಯಾಮಲಾ ಭಟ್ (61) ಹಾಗೂ ಅಕ್ಕ ಕಣ್ಮಣಿ ಜಿ.ರಾವ್‌ (36) ಜಾಮೀನಿಗಾಗಿ ದಕ್ಷಿಣ ಕನ್ನಡದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಆರೋಪಿಗಳು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್‌ 483ರ ಅಡಿ ಸಲ್ಲಿಸಿರುವ ಅರ್ಜಿಯನ್ನು  ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ನಾಲ್ಕನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಗುರುವಾರ ವರ್ಗಾಯಿಸಿದೆ. 

ಅರ್ಜಿಯ ಮೊದಲ ವಿಚಾರಣೆ ನಡೆದಿದ್ದು, ಪಾಸಿಕ್ಯೂಷನ್‌ಗೆ ನೋಟಿಸ್ ನೀಡಲಾಗಿದೆ. ಅರ್ಜಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ವಿಚಾರಣೆಯನ್ನು ಇದೇ 16ರಂದು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೂಲ್ಕಿ ಠಾಣೆಯ ವ್ಯಾಪ್ತಿಯ ರೈಲು ಹಳಿಯಲ್ಲಿ ಪಕ್ಷಿಕೆರೆಯ ಕಾರ್ತಿಕ್ ಭಟ್  ಅವರ ಶವ ನ.8ರಂದು ರಾತ್ರಿ ಪತ್ತೆಯಾಗಿತ್ತು. ಮರುದಿನ ಆತನ ಪತ್ನಿ ಪ್ರಿಯಾಂಕಾ ಹಾಗೂ ಮಗು ಹೃದಯ್‌ ಪಕ್ಷಿಕೆರೆಯ ಮನೆಯ ಕೊಠಡಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಾರ್ತಿಕ್ ಭಟ್‌ ಅತ್ತೆ ಸಾವಿತ್ರಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಮೂಲ್ಕಿ ಠಾಣೆಯ ಪೊಲೀಸರು ಶ್ಯಾಮಲಾ ಭಟ್‌ ಹಾಗೂ ಕಣ್ಮಣಿ ರಾವ್ ಅವರನ್ನು ನ.11ರಂದು ಬಂಧಿಸಿದ್ದರು. 

- ಇನ್ನೂ ಮುಚ್ಚಿಯೇ ಇದೆ ಹೋಟೆಲ್‌

ಪಕ್ಷಿಕೆರೆಯ ಕಾರ್ತಿಕ್‌ ಭಟ್‌ ಅವರ ತಂದೆ ಜನಾರ್ಧನ ಭಟ್‌ ಪಕ್ಷಿಕೆರೆ ಪೇಟೆಯಲ್ಲಿ ನಡೆಸುತ್ತಿದ್ದ ಕಾರ್ತಿಕ್ ಹೋಟೆಲ್‌ ಈ ಘಟನೆಯ ಬಳಿಕ ಮುಚ್ಚಿದೆ. ಕಳೆದ ಭಾನುವಾರದವರೆಗೆ (ನ.10) ಈ ಹೋಟೆಲ್‌ ತೆರೆದಿತ್ತು. ಜನಾರ್ದನ ಭಟ್‌– ಶ್ಯಾಮಲಾ ದಂಪತಿ 30 ವರ್ಷಗಳಿಂದ ಈ ಹೋಟೆಲ್‌ ನಡೆಸುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.