ಮಂಗಳೂರು: ನಗರದ ಬಜಾಲ್ ಗ್ರಾಮದ ದೋಟ ಹೌಸ್, ಕಾನೆಕರಿಯ ಎಂಬಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವನ್ನು ಕದ್ದೊಯ್ದ ಪ್ರಕರಣ ಸಂಬಂಧ ಕಂಕನಾಡಿ ನಗರ ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಮಾರುತಿ ಕಾರು, ಕತ್ತಿ, ಹಗ್ಗಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಗುರುನಗರದ ಕೊಟ್ಟಾರಿ ಗುಡ್ಡೆ ಬಳಿಯ ಬಂಗ್ಲ ಗುಡ್ಡೆ ನಿವಾಸಿ ಮಹಮ್ಮದ್ ಅಶ್ಪಾಕ್ ಅಲಿಯಾಸ್ ಶಮೀರ್ ಅಲಿಯಾಸ್ ಚಮ್ಮಿ (22), ಅಡ್ಡೂರಿನ ಅಜರುದ್ದೀನ್ ಅಲಿಯಾಸ್ ಅಜರ್ (31), ಜಲ್ಲಿಗುಡ್ಡೆ ಬಜಾಲ್ ಪಡ್ಪುವಿನ ಸುಹೈಲ್ (19), ಬಜಾಲ್ ಪಕ್ಕಲಡ್ಕದ ಮೊಹಮ್ಮದ್ ಅಫ್ರೀದ್ (25) ಹಾಗೂ ಬಜಾಲ್ಕಟ್ಟಪುಣಿಯ ಶಾಹೀದ್ ಅಲಿಯಾಸ್ ಚಾಯಿ (19)ೆಂದು ಗುರುತಿಸಲಾಗಿದೆ. ಅಜರುದ್ದೀನ್ ವಿರುದ್ಧ ಬಜಪೆ ಠಾಣೆಯಲ್ಲಿ ಹಾಗೂ ಮೊಹಮ್ಮದ್ ಅಫ್ರೀದ್ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಈ ಹಿಂದೆಯೂ ಇಂತಹದ್ದೇ ಪ್ರಕರಣ ದಾಖಲಾಗಿತ್ತು.
ಕಾನೆಕರಿಯದ ಅಶ್ವಿನ್ ತಮ್ಮ ದನಕರುಗಳನ್ನು ಜುಲೈ 20ರಂದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು. ಮರುದಿನ ಮುಂಜಾನೆ ಸುಮಾರು 3.30ರ ವೇಳೆಗೆ ಹಸು ಕೂಗಿದ ಶಬ್ದ ಕೇಳಿ ಅಶ್ವಿನ್ ಹಾಗೂ ಮನೆಯವರು ಕೊಟ್ಟಿಗೆ ಬಳಿ ಬಂದು ಪರಿಶೀಲಿಸಿದ್ದರು. ಆಗ ಒಂದು ಹಸು ಕೊಟ್ಟಿಗೆ ಹೊರಗೆ ನಿಂತುಕೊಂಡಿದ್ದು, ಅದರ ಕೊರಳಿಗೆ ಹಗ್ಗ ಕಟ್ಟಲಾಗಿತ್ತು. ಕೊಟ್ಟಿಗೆಯೊಳಗಿದ್ದ ಕಂದು ಮಿಶ್ರಿತ ಬಿಳಿ ಬಣ್ಣದ ದೊಡ್ಡ ಹಸು ಕಾಣೆಯಾಗಿತ್ತು. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಅವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಕಾಣೆಯಾದ ಹಸುವಿನ ಮೌಲ್ಯ ₹ 40 ಸಾವಿರ ಎಂದು ಅಂದಾಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.