ADVERTISEMENT

ಬಜಪೆ: ಕ್ಲೋರೊಫಾರ್ಮ್ ಬಳಸಿ ದರೊಡೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:24 IST
Last Updated 5 ಜುಲೈ 2024, 14:24 IST
ಪರಿಶೀಲನೆ ನಡೆಸಿದ ಪೊಲೀಸರು
ಪರಿಶೀಲನೆ ನಡೆಸಿದ ಪೊಲೀಸರು   

ಬಜಪೆ: ಇಲ್ಲಿನ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್‌ ಸಂಸ್ಥೆಗೆ ಮೂವರು ಅಪರಿಚಿತರು ಗುರುವಾರ ಸಂಜೆ ವೇಳೆ ದಿಢೀರ್‌ ನುಗ್ಗಿ ಕ್ಲೋರೊಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜಪೆ ಮಸೀದಿ ಕಡೆಯಿಂದ ಸ್ಕೂಟರ್‌ನಲ್ಲಿ ಬಂದು ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ಮತ್ತೆ ಮಾರುಕಟ್ಟೆ ಸಮೀಪದ ಫೈನಾನ್ಸ್‌ ಸಂಸ್ಥೆ ಒಳಗೆ ಏಕಾಏಕಿ ನುಗ್ಗಿದ ಅಪರಿಚಿತರು, ಆಸಿಡ್ ತುಂಬಿದ್ದ ಸಣ್ಣ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟಿದ್ದಾರೆ. ಬಳಿಕ ಕ್ಯಾಶ್ ಕೌಂಟರ್‌ಗೆ ಕೈ ಹಾಕಲು ಪ್ರಯತ್ನಿಸಿದ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್‌ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ದೂಡಿ ಹಾಕಿದ್ದು, ಅವರು ಕಿರುಚಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.

ಮೂವರ ಪೈಕಿ ಒಬ್ಬ ಹೆಲ್ಮೆಟ್ ಹಾಕಿಕೊಂಡು ಸ್ಕೂಟರ್‌ ಅನ್ನು ಚಾಲನೆಯಲ್ಲಿಟ್ಟುಕೊಂಡೇ ಕಾಯುತ್ತಿದ್ದ. ಇಬ್ಬರ ಪೈಕಿ ಒಬ್ಬ ಬುರ್ಖಾ ಧರಿಸಿದ್ದು, ಸ್ಕೂಟರ್ ಸವಾರನ ಹಿಂಬದಿಯಲ್ಲಿ ಕುಳಿತಿದ್ದುದನ್ನು ಸಮೀಪದಲ್ಲಿ ಇದ್ದವರು, ಸಿಸಿಟಿವಿ ಕ್ಯಾಮೆರಾದ ದೃಶ್ಯಗಳಲ್ಲಿ ಗೊತ್ತಾಗಿದೆ. ಸಂಸ್ಥೆಗೆ ನುಗ್ಗಿದ ಒಬ್ಬ ಹೆಲ್ಮೆಟ್ ಹಾಗೂ ರೈನ್ ಕೋಟ್ ಧರಿಸಿಯೇ ಇದ್ದ. ಸ್ಕೂಟರ್‌ನಲ್ಲಿ ನಂಬರ್ ಪ್ಲೇಟ್ ಕೂಡ ಇರಲಿಲ್ಲ.

ADVERTISEMENT

ಫೊರೆನ್ಸಿಕ್‌, ಬೆರಳಚ್ಚು ತಜ್ಞರ ತಂಡ ಹಾಗೂ ಬಜಪೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದರೋಡೆಗೆ ಯತ್ನಿಸಿದ ಮೂವರು ಅಪರಿಚಿತರ ತಂಡ ಒಂದೇ ಸ್ಕೂಟರ್‌ನಲ್ಲಿ ಅತಿವೇಗದಿಂದ ಮಸೀದಿ ಪಕ್ಕದ ರಸ್ತೆಯ ಮುರಾ ಜಂಕ್ಷನ್ ಮೂಲಕ ಕೊಳಂಬೆ ಮಾರ್ಗವಾಗಿ ಗುರುಪುರ ಕೈಕಂಬ ಕಡೆಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಲೋರೊಫಾರ್ಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.