ADVERTISEMENT

ಆರ್‌. ಅಶೋಕ ಅಲ್ಲ, ಅಡ್ಜಸ್ಟ್‌ಮೆಂಟ್‌ ಅಶೋಕ: ಬಜರಂಗದಳದ ಪುನೀತ್ ಅತ್ತಾವರ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 12:41 IST
Last Updated 21 ಫೆಬ್ರುವರಿ 2024, 12:41 IST
<div class="paragraphs"><p>ಪುನೀತ್ ಅತ್ತಾವರ ಮತ್ತು&nbsp;ಆರ್ ಅಶೋಕ</p></div>

ಪುನೀತ್ ಅತ್ತಾವರ ಮತ್ತು ಆರ್ ಅಶೋಕ

   

ಮಂಗಳೂರು: ‘ಗೃಹಸಚಿವನಾಗಿದ್ದಾಗ ಬಜರಂಗ ದಳದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದೆ’ ಎಂದು ವಿಧಾನ ಸಭಾ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ, ‘ನೀವು ಆರ್. ಅಶೋಕ ಅಲ್ಲ. ನಿಮ್ಮ ಹೆಸರನ್ನು ಎ. ಅಶೋಕ ಅಂತ ಬದಲಾಯಿಸಿ ಬಿಡಿ ಅಡ್ಜಸ್ಟ್‌ಮೆಂಟ್‌ ಅಶೋಕ್ ಅವರೇ’ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡುವಾಗ ಆರ್‌.ಅಶೋಕ ಅವರು, ‘ಮಂಗಳೂರಿನ ಪಬ್‌ನಲ್ಲಿ ಬಜರಂಗದಳ ಕಾರ್ಯಕರ್ತರು ನುಗ್ಗಿ ಹೆಣ್ಣುಮಕ್ಕಳಿಗೆ ಹೊಡೆದರು ಎಂದು ಇದೇ ಸದನದಲ್ಲಿ ಧರಣಿ ನಡೆದಿತ್ತು. ಆಗ ನಾನು ಗೃಹಸಚಿವ. ನನ್ನ ಮೇಲೆ ಬಹಳ ಒತ್ತಡ ಇತ್ತು. ಫೋನ್‌ ಕರೆಗಳು ಬಂದಿದ್ದವು. ಆದರೆ, ನಾನು ಹಿಂದೆ ಮುಂದೆ ನೋಡಿಲ್ಲ. ನಾನು ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಿಸಿದೆ’ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

ಆ ವಿಡಿಯೊ ತುಣುಕನ್ನು ಹಂಚಿಕೊಂಡಿರುವ ಪುನೀತ್‌ ಅತ್ತಾವರ, ‘ನಿಮ್ಮ ನಾಲಗೆಯನ್ನು, ನಾಲಗೆ ರೀತಿ ಬಳಸಿ. ಎಕ್ಕಡದ ರೀತಿ ಬಳಸಿಕೊಳ್ಳಬೇಡಿ. ಅಡ್ಜಸ್ಟ್‌ಮೆಂಟ್‌ ರಾಜಕಾರಣ ಎಂಬ ಗೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ. ಸಿದ್ಧಾಂತಕ್ಕಾಗಿ ಹೋರಾಡುವ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಅವರನ್ನು ಸುಮ್ಮನಿರಿಸುವಷ್ಟು ದೊಡ್ಡವರು ನೀವಾಗಿಲ್ಲ. ಬಜರಂಗದಳ ಕಾರ್ಯಕರ್ತರು ಹೋರಾಡುವುದು ನಿಮ್ಮ ಹಾಗೆ ವೈಯಕ್ತಿಕ ಲಾಭದ ಆಸೆಗಾಗಿ ಅಲ್ಲ. ನಿಮ್ಮ ರಾಜಕೀಯ ತೆವಲಿಗಾಗಿ ಬಜರಂಗದಳ ಕಾರ್ಯಕರ್ತರ ಬಗ್ಗೆ ಆಡಿದ ಮಾತನ್ನು ಹಿಂದೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ

‘ಪ್ರತಿಪಕ್ಷ ನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ ಎಂಬ ಮಾತು ನೆನಪಿರಲಿ. ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ. ಒಂದಾ ಬಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ ಇಲ್ಲದಿದ್ದರೆ ಬಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.