ಮಂಗಳೂರು: ಹೊಸಬಟ್ಟೆ, ಅತ್ತರ್‌ನ ಸುವಾಸನೆಯ ನಡುವೆ ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಮನೆಮನೆಗೆ ಸೌಹಾರ್ದ ಭೇಟಿ ಮಾಡಿ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.
ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುವ ಈದ್–ಉಲ್–ಅಝ್‌ಹಾ ಅಥವಾ ಬಕ್ರಿದ್ ಹಬ್ಬವನ್ನು ಜಿಲ್ಲೆಯಾದ್ಯಂತೆ ಸಡಗರದಿಂದ ಆಚರಿಸಲಾಯಿತು. ಮಂಗಳೂರು ನಗರದ ವಿವಿಧ ಮಸೀದಿ, ಈದ್ಗಾಗಳಲ್ಲಿ ನಡೆದ ಸಾಮೂಹಿಕ ನಮಾಜ್ ಭಕ್ತಿ–ಭಾವದ ಅಲೆಯನ್ನು ಎಬ್ಬಿಸಿತು.
ಪ್ರವಾದಿಯ ತ್ಯಾಗ, ಸಹನೆ ಮತ್ತು ಧರ್ಮನಿಷ್ಠೆಯನ್ನು ಕೊಂಡಾಡುವ ಹಬ್ಬದ ದಿನವಾದ ಸೋಮವಾರ ಬೆಳಿಗ್ಗೆಯಿಂದಲೇ ಮುಸ್ಲಿಮರ ನಿವಾಸಗಳಲ್ಲಿ ಸಡಗರ ಮನೆಮಾಡಿತ್ತು. ಹೊಸ ಬಟ್ಟೆ ತೊಟ್ಟುಕೊಂಡು ಸುವಾಸನೆಯ ತೈಲ ಹಚ್ಚಿಕೊಂಡು ಮಸೀದಿಯತ್ತ ಹೊರಟವರು ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಬಾ ಮತ್ತು ಪ್ರವಚನ ಆಲಿಸಿದರು.
ನಗರದ ಬಾವುಟಗುಡ್ಡದ ಈದ್ಗಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದ್ ಉನ್ನೂರ್, ಸ್ಟೇಟ್‌ಬ್ಯಾಂಕ್‌ನ ಇಬ್ರಾಹಿಂ ಖಲೀಲ್ ಮಸ್ಜಿದ್, ಕಂಕನಾಡಿಯ ರಹ್ಮಾನಿಯಾ ಜುಮಾ ಮಸ್ಜಿದ್, ಬಲ್ಮಠದ ವಾಸ್‌ಲೇನ್ ಇಹ್ಸಾನ್ ಮಸ್ಜಿದ್, ಪಾಂಡೇಶ್ವರ ಪೊಲೀಸ್ ಲೇನ್‌ನ ಫೌಝಿಯಾ ಜುಮಾ ಮಸ್ಜಿದ್, ಬಂದರ್ ಕಚ್ಚೀ ಮೇಮನ್ ಜುಮಾ ಮಸ್ಜಿದ್, ಕಂದುಕ ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಮುಹಿಯುದ್ದೀನ್ ಜುಮಾ ಮಸ್ಜಿದ್, ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್, ಪಂಪ್‌ವೆಲ್‌ನ ಮಸ್ಜಿದ್ ಉತ್ತಖ್ವಾ, ಕುದ್ರೋಳಿ ಜಾಮಿಯಾ ಜುಮಾ ಮಸ್ಜಿದ್, ಬಿಕರ್ನಕಟ್ಟೆಯ ಅಹಸನ್ ಉಲ್ ಮಸಾಜೀದ್ ಸೇರಿದಂತೆ ವಿವಿಧ ಕಡೆಗಳ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡರು.
ಈದ್ ಸಂದೇಶ ಆಲಿಸಿದ ಅವರು ನೆರೆಮನೆಗಳಿಗೆ ಹಾಗೂ ಸಂಬಂಧಿಕರ ಮನೆಗೆ ತೆರಳಿ ಶುಭ ಕಾಮನೆಗಳನ್ನು ಹೇಳಿದರು. ಮನೆಗಳಲ್ಲಿ ಹಬ್ಬಕ್ಕೆಂದೇ ತಯಾರಿಸಲಾದ ನಾನಾ ಬಗೆಯ ವಿಶಿಷ್ಟ ತಿಂಡಿ ಅವರನ್ನು ಕಾಯುತ್ತಿತ್ತು. ಮಧ್ಯಾಹ್ನ ಭರ್ಜರಿ ಭೋಜನ ಕೂಡ ಇತ್ತು.
ಬಹುತೇಕ ಮಂದಿ ಈದ್ ನಮಾಝ್ ಮತ್ತು ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿದರು. ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿ ಕೆಲಹೊತ್ತು ಕಳೆದರು.
ಖುತ್ಬಾ ಪಾರಾಯಣ ಮಾಡಿದ ಜಿಲ್ಲಾ ಖಾಝಿ
ಮಂಗಳೂರಿನ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರು ಖುತ್ಬಾ ಪಾರಾಯಣ ಮಾಡಿದರು. ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲ ಕುಂಞಿ, ಪ್ರಧಾನ ಕಾರ್ಯದರ್ಶಿ ಹನೀಫ್ ಬಂದರ್, ಕೋಶಾಧಿಕಾರಿ ಎಸ್.ಎಂ ರಶೀದ್, ಉಪಾಧ್ಯಕ್ಷ ಕೆ.ಅಶ್ರಫ್, ಈದ್ಗಾ ಮಸೀದಿಯ ಖತೀಬ್ ಪಿ.ಎಚ್ ಮುಸ್ತಫಾ ಅಝ್ಹರಿ ಇದ್ದರು.
ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್ ಅಬ್ದುಲ್ ಅಕ್ರಂ ಬಾಖವಿ ಅವರು ನಮಾಝ್‌ನ ನೇತೃತ್ವ ವಹಿಸಿದ್ದರು. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.