ಮಂಗಳೂರು: ‘ಬ್ಯಾಂಕ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುತ್ತಿರುವುದನ್ನು ವಿರೋಧಿಸಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಅಭಿಯಾನ ಆಯೋಜಿಸಲಾಗುವುದು’ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ವಜ್ರ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ರೂಪುರೇಷೆ ಸಿದ್ಧಪಡಿಸಲು ಶೀಘ್ರವೇ ಸಭೆ ನಡೆಸಲಾಗುವುದು ಎಂದರು.
‘ಬ್ಯಾಂಕ್‌ಗಳಲ್ಲಿ ಸೇವೆಯೇ ಮುಖ್ಯ ಆಗಬೇಕು. ಈಗ ನೌಕರರ ಕೊರತೆಯಿಂದಾಗಿ ಗ್ರಾಹಕರಿಗೆ ತೃಪ್ತಿಕರ ಸೇವೆ ಸಿಗುತ್ತಿಲ್ಲ. ದೇಶದಾದ್ಯಂತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ’ ಎಂದು ತಿಳಿಸಿದರು.
‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ 75 ಸಾವಿರಕ್ಕೂ ಅಧಿಕ ನೌಕರರ ನೇಮಕಾತಿ ಆಗಬೇಕಿದೆ. ಯಂತ್ರಗಳ ಅತಿಯಾದ ಬಳಕೆ ಮತ್ತು ಗುತ್ತಿಗೆ ಆಧಾರದ ನೇಮಕಾತಿ ಈ ಕ್ಷೇತ್ರವನ್ನು ಅಸ್ಥಿರಗೊಳಿಸಿದೆ’ ಎಂದು ದೂರಿದರು.
‘ಕಾರ್ಪೊರೇಟ್ ಕಂಪನಿಗಳು ಮತ್ತು ಶ್ರೀಮಂತರ ಪರವಾಗಿರುವ ಬ್ಯಾಂಕ್‌ಗಳು ಸಾಮಾನ್ಯ ಜನರ ಕೊಡುಗೆಯನ್ನು ಮರೆಯುತ್ತಿವೆ. ದೇಶದ ಬ್ಯಾಂಕ್‌ಗಳಲ್ಲಿ ಇರುವ ₹225 ಲಕ್ಷ ಕೋಟಿ ಮೊತ್ತದ ಠೇವಣಿಯಲ್ಲಿ ಬಹುಪಾಲು ಬಡಮಧ್ಯಮ ವರ್ಗದ್ದು’ ಎಂದು ತಿಳಿಸಿದರು.
‘ಶ್ರೀಮಂತರು ಸಾಲ ಪಡೆದುಕೊಳ್ಳುವುದಕ್ಕಾಗಿಯೇ ಬ್ಯಾಂಕ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಶ್ರೀಮಂತರು ಒಟ್ಟು ₹14 ಲಕ್ಷ ಕೋಟಿ ಸಾಲ ಮರುಪಾವತಿಸಬೇಕಾಗಿದೆ. ಅವರನ್ನು ದಿವಾಳಿ ಎಂದು ಘೋಷಿಸದೆ ವಿನಾಯಿತಿ, ರಿಯಾಯಿತಿಗಳ ‘ಕೊಡುಗೆ’ ನೀಡಲಾಗುತ್ತದೆ. ಕೃಷಿ, ಕೂಲಿ ಕಾರ್ಮಿಕರ ಸಾಲಕ್ಕೆ ಸಂಬಂಧಿಸಿ ಆಸ್ತಿ ಮುಟ್ಟುಗೋಲು ಹಾಕಲಾಗುತ್ತದೆ. ಈ ತಾರತಮ್ಯದ ವಿರುದ್ಧವೂ ಹೋರಾಟ ನಡೆಯಲಿದೆ’ ಎಂದರು.
ಸೇವಾ ಶುಲ್ಕದ ಭಾರ: ‘ಶ್ರೀಮಂತರು ಬ್ಯಾಂಕ್‌ನಲ್ಲಿ ಠೇವಣಿ ಇರಿಸುವುದಿಲ್ಲ. ಬ್ಯಾಂಕ್ ಜೊತೆ ಹೆಚ್ಚು ಒಡನಾಟ ಇರುವವರಿಂದ ಪ್ರತಿಯೊಂದಕ್ಕೂ ಸೇವಾ ಶುಲ್ಕ ಪಡೆಯಲಾಗುತ್ತದೆ. ಇದರ ಬಗ್ಗೆಯೂ ಹೋರಾಟ ನಡೆಯಬೇಕಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.