ADVERTISEMENT

13 ವರ್ಷಗಳ ಬಳಿಕ ಶೇ 11 ಡಿವಿಡೆಂಡ್ ಸಾಧನೆ

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ 62 ವರ್ಷಗಳ ಬಳಿಕ ₹ 1.05 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:51 IST
Last Updated 6 ಸೆಪ್ಟೆಂಬರ್ 2024, 15:51 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಪೇಟೆಯಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ ಸ್ವಂತ ಕಚೇರಿ ಸಹಿತ ಬಹುಮಹಡಿ ಕಟ್ಟಡ ಹೊಂದಿದೆ
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಪೇಟೆಯಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ ಸ್ವಂತ ಕಚೇರಿ ಸಹಿತ ಬಹುಮಹಡಿ ಕಟ್ಟಡ ಹೊಂದಿದೆ   

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬಳಿ 1962ರಲ್ಲಿ ಆರಂಭಗೊಂಡ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ 62 ವರ್ಷಗಳ ಬಳಿಕ ಪ್ರಥಮ ಬಾರಿಗೆ ₹ 1.05 ಕೋಟಿ ಲಾಭ ಗಳಿಸಿದ್ದು, 13 ವರ್ಷಗಳ ಬಳಿಕ ಶೇ 11 ಡಿವಿಡೆಂಡ್ ನೀಡುತ್ತಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 84 ಗ್ರಾಮಗಳಿಗೆ ಸಂಬಂಧಿಸಿ ವಿಸ್ತಾರಗೊಂಡಿರುವ ಬ್ಯಾಂಕ್ ರೈತರ ಆಶಾಕಿರಣವಾಗಿದ್ದು, ಸಾಲ ವಸೂಲಾತಿ ಮತ್ತು ಲಾಭಾಂಶದಲ್ಲಿ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನಕ್ಕೆ ಏರಿಕೆಯಾಗಿದೆ ಎಂದರು.

ಸುಮಾರು 100 ಸದಸ್ಯರು ಬಾಕಿ ಇರಿಸಿಕೊಂಡಿದ್ದ ಸುಮಾರು ₹ 6.50 ಕೋಟಿ ಮೊತ್ತದ ಸುಸ್ತಿ ಸಾಲದ ಪೈಕಿ ₹ 3 ಕೋಟಿ ಮೊತ್ತವನ್ನು ಕಾನೂನು ರೀತಿಯಲ್ಲೇ ಮರು ವಸೂಲಿ ಮಾಡುವ ಮೂಲಕ ಬ್ಯಾಂಕ್ ಲಾಭದತ್ತ ಸಾಗಿದೆ. ಬ್ಯಾಂಕ್‌ನ ಬಹುಮಹಡಿ ಕಟ್ಟಡದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಿತ ಒಟ್ಟು 4 ಸಹಕಾರಿ ಸಂಘ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಿಂದ ತಿಂಗಳಿಗೆ ತಲಾ ₹ 2.20ಲಕ್ಷ ಆದಾಯ ಬರುತ್ತಿದೆ ಎಂದರು.

ADVERTISEMENT

‌14 ರಂದು ಮಹಾಸಭೆ: ಇಲ್ಲಿನ ಬಿ.ಸಿ.ರೋಡು ಗೀತಾಂಜಲಿ ಸಭಾಂಗಣದಲ್ಲಿ ಸೆ.14ರಂದು ಬೆಳಿಗ್ಗೆ 11 ಗಂಟೆಗೆ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸದಸ್ಯರಿಗೆ ಪ್ರಥಮ ಬಾರಿಗೆ ವಿಶೇಷ ಉಡುಗೊರೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು.

ಬ್ಯಾಂಕ್‌ನ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ, ನಿರ್ದೇಶಕರಾದ ಲಿಂಗಪ್ಪ ಪೂಜಾರಿ, ವಿಜಯಾನಂದ, ಸುಂದರ ಪೂಜಾರಿ, ಲೋಲಾಕ್ಷಿ, ಲತಾ, ವ್ಯವಸ್ಥಾಪಕ ಪದ್ಮನಾಭ ಜಿ. ಭಾಗವಹಿಸಿದ್ದರು.

ವಿಶೇಷತೆ: 2020ನೇ ಜ.1ರಂದು ನಡೆದ ಚುನಾವಣೆಯಲ್ಲಿ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತ 8 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು. ಈ ಬಗ್ಗೆ ಎರಡು ವರ್ಷ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಳಿಸಿ, 2022ರ ಫೆ.19ರಂದು ಪ್ರಥಮ ಬಾರಿಗೆ ಅಧ್ಯಕ್ಷರಾಗಿ ವಕೀಲ ಅರುಣ್ ರೋಶನ್ ಡಿಸೋಜ ಆಯ್ಕೆಯಾಗಿದ್ದರು. 62 ವರ್ಷಗಳ ಹಿಂದೆ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಕಾರಿಂಜ ಕ್ಷೇತ್ರದ ಮಾಜಿ ಧರ್ಮದರ್ಶಿ ಪಿ.ಜಿನರಾಜ ಅರಿಗ, ನಂದಾವರ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಎ.ಸಿ.ಭಂಡಾರಿ, ಸಾಹಿತಿ ನಿರ್ಪಾಜೆ ಭೀಮ ಭಟ್, ಫಜೀರು ಲವ-ಕುಶ ಕಂಬಳ ಸಮಿತಿ ಅಧ್ಯಕ್ಷ ವೆಂಕಪ್ಪ ಕಾಜವ ಸೇರಿ 18 ಮಂದಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಬ್ಯಾಂಕ್‌ಗೆ ಸ್ವಂತ ಕಟ್ಟಡ ನಿರ್ಮಿಸಿದ್ದರು. ಈ ಪೈಕಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಜೈನ್ 18 ವರ್ಷ ಅಧ್ಯಕ್ಷರಾಗಿದ್ದರು.

ಅರುಣ್ ರೋಶನ್ ಡಿಸೋಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.