ADVERTISEMENT

ಪಣಂಬೂರು ಬೀಚ್‌ನಲ್ಲಿ ಮತೀಯ ಗೂಂಡಾಗಿರಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 16:18 IST
Last Updated 5 ಫೆಬ್ರುವರಿ 2024, 16:18 IST

ಮಂಗಳೂರು: ನಗರದ ಪಣಂಬೂರು ಬೀಚ್‌ನಲ್ಲಿ ಜೊತೆಯಲ್ಲಿದ್ದ ಮುಸ್ಲಿಂ ಯುವಕ– ಹಿಂದೂ ಯುವತಿಗೆ ಕಿರುಕುಳ ನೀಡಿ ಮತೀಯ ಗೂಂಡಾಗಿರಿ ನಡೆಸಿದ ಆರೋಪದ ಮೇರೆಗೆ ಪೊಲೀಸರು ಹಿಂದುತ್ವವಾದಿ ಸಂಘಟನೆಯ ನಾಲ್ವರನ್ನು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಪಿಲಾತಬೆಟ್ಟು ಗ್ರಾಮದ ಪ್ರಶಾಂತ್ ಭಂಡಾರಿ (38), ಬೆಳ್ತಂಗಡಿ ತಾಲ್ಲೂಕು ಕರಾಯ ಗ್ರಾಮದ ಉಮೇಶ್ ಪಿ. (23), ಪುತ್ತಿಲ ಗ್ರಾಮದ ಸುಧೀರ್ (26)  ಮತ್ತು ಮಚ್ಚಿನ ಗ್ರಾಮದ ಕೀರ್ತನ್ ಪೂಜಾರಿ (20) ಬಂಧಿತರು. ಆರೋಪಿಗಳ ವಿರುದ್ಧ, ಅಕ್ರಮ ಕೂಟ ರಚನೆ, ಯುವಕ– ಯುವತಿಯನ್ನು ತಡೆದು ಅಡ್ಡಿಪಡಿಸಿದ್ದು, ಉದ್ದೇಶಪೂರ್ವಕವಾಗಿ ಅವಮಾನಿಸಿ, ಶಾಂತಿಭಂಗವನ್ನುಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಕರೆದಾಗ ಠಾಣೆಗೆ ಹಾಜರಾಗುವಂತೆ ಸೂಚಿಸಿ, ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಅವರನ್ನು ಬಿಟ್ಟುಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಯುವತಿಯೊಬ್ಬರು ಮತೀಯ ಗೂಂಡಾಗಿರಿ ವಿರುದ್ಧ ಪಣಂಬೂರು ಠಾಣೆಗೆ ದೂರು ನೀಡಿದ್ದರು. 

ADVERTISEMENT

‘ನಾನು ಕೆಲಸದ ನಿಮಿತ್ತ ಮಲ್ಪೆಗೆ ಹೋಗುವವಳಿದ್ದೆ. ನನಗೆ ಪರಿಚಯವಿದ್ದ ಹುಡುಗನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿದ್ದು, ಆತನಿಗೆ ಅಭಿನಂದನೆ ಸಲ್ಲಿಸಲು ಪಣಂಬೂರು ಬೀಚ್‌ನಲ್ಲಿ ಭಾನುವಾರ ಸಂಜೆ 4.50 ಸುಮಾರಿಗೆ ಭೇಟಿಯಾಗಿದ್ದೆ. ಆಗ ಕೆಲವು ಯುವಕರ ಗುಂಪೊಂದು ನಮ್ಮಿಬ್ಬರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿತ್ತು. ನಾವಿಬ್ಬರು ಒಟ್ಟಿಗೆ ಇದ್ದಿದ್ದಕ್ಕೆ ಆ ಗುಂಪಿನಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿ ಬೈದಿದ್ದರು. ‌ಇನ್ನು ಕೆಲವರು ಇದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದರು’ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

‘ಘಟನೆ ನಡೆದ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದ್ದರು. ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಪಣಂಬೂರು ಬೀಚ್‌, ತಣ್ಣೀರುಬಾವಿ ಬೀಚ್‌ ಮತ್ತು ಟ್ರೀ ಪಾರ್ಕ್‌ಗಳಲ್ಲಿ ನಿತ್ಯವೂ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ನಗರದ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.