ADVERTISEMENT

ಮಂಗಳೂರು: ಬೀಚ್ ಪ್ರವಾಸೋದ್ಯಮಕ್ಕೆ ಬೇಕಿದೆ ನವ ಚೇತನ

ತಣ್ಣೀರು ಬಾವಿ ಬೀಚ್‌ಗೆ ಹೊಸ ನೋಟ, ಪಣಂಬೂರಿನಲ್ಲಿ ವೈವಿಧ್ಯ ನೀರಾಟ

ಸಂಧ್ಯಾ ಹೆಗಡೆ
Published 5 ಫೆಬ್ರುವರಿ 2024, 7:28 IST
Last Updated 5 ಫೆಬ್ರುವರಿ 2024, 7:28 IST
ಪಣಂಬೂರು ಬೀಚ್‌ನಲ್ಲಿ ನೀರಾಟದ ಮನರಂಜನೆಯ ಮೋಜು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಪಣಂಬೂರು ಬೀಚ್‌ನಲ್ಲಿ ನೀರಾಟದ ಮನರಂಜನೆಯ ಮೋಜು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಮಂಗಳೂರು: ಅಪೂರ್ವ ಅನುಭೂತಿ ನೀಡುವ ಸೂರ್ಯಾಸ್ತದ ಸೊಬಗು, ನೀರಾಟದ ಬೆಡಗು ಅನುಭವಿಸುವ ಕಡಲ ತೀರಗಳು ಮಂಗಳೂರು ಸುತ್ತಮುತ್ತ ಇದ್ದರೂ, ದೇಶ–ವಿದೇಶಗಳ ಪ್ರವಾಸಿಗರನ್ನು ಸಮ್ಮೋಹನಗೊಳಿಸಿ, ಆ ಮೂಲಕ ಆರ್ಥಿಕತೆ ವೃದ್ಧಿಗೆ ಇವುಗಳ ಕೊಡುಗೆ ‘ಸೀಮಿತ’ ಎನ್ನುವಷ್ಟೇ ಇದೆ.

ತಣ್ಣೀರು ಬಾವಿ ಕಡಲ ತೀರದಲ್ಲಿ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯಲು ಬೇಕಾದ ಎಲ್ಲ ಸೌಲಭ್ಯಗಳು ತಲೆ ಎತ್ತಿವೆ. ಪಣಂಬೂರಿನಲ್ಲಿ ತೇಲುವ ಸೇತುವೆ, ಜಲ ಕ್ರೀಡೆಗಳು ಪ್ರಮುಖ ಆಕರ್ಷಣೆ. ಸಸಿಹಿತ್ಲು ಸರ್ಫಿಂಗ್ ಕ್ರೀಡೆ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗಿದೆ. ಇಷ್ಟೆಲ್ಲ ವಿಶೇಷತೆಗಳು ಇದ್ದರೂ, ಜಿಲ್ಲೆಯ ಪ್ರಮುಖ ಕಡಲ ತೀರಗಳು ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶಿ ಪ್ರವಾಸಿಗರನ್ನು ನಿರೀಕ್ಷಿತ ಮಟ್ಟದಲ್ಲಿ ಸೆಳೆಯುತ್ತಿಲ್ಲ ಎಂಬ ಕೂಗು ಜನರದ್ದಾಗಿದೆ.

ಸರ್ಫರ್‌ಗಳನ್ನು ಸೆಳೆಯುವ ಸಸಿಹಿತ್ಲು ಬೀಚ್‌:

ಪ್ರಶಾಂತ ಸಮುದ್ರದಲ್ಲಿ ಸಣ್ಣ ಸಣ್ಣ ಅಲೆಗಳು ಏಳುವ ಸಸಿಹಿತ್ಲು ಕಡಲ ತೀರವು ನೋಡುಗರನ್ನು ಮೋಹಕಗೊಳಿಸುತ್ತದೆ. ಇಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸರ್ಫಿಂಗ್, ಸ್ಟ್ಯಾಂಡ್‌ ಅಪ್ ಪೆಡಲಿಂಗ್ ಸ್ಪರ್ಧೆಗಳು ನಡೆಯುತ್ತವೆ. ಪ್ರತಿದಿನ ಸ್ಥಳೀಯ ಸರ್ಫರ್‌ಗಳು ಇಲ್ಲಿ ಸರ್ಫಿಂಗ್ ಮಾಡಲು ಬರುತ್ತಾರೆ. ಆದರೆ, ಸರ್ಫಿಂಗ್ ಮುಗಿದ ಮೇಲೆ ಬಟ್ಟೆ ಬದಲಾಯಿಸಲು ಕೊಠಡಿ ಕೂಡ ಇಲ್ಲಿ ಇಲ್ಲ. ನೀರಿನಲ್ಲಿ ಮುಳುಗೆದ್ದ ಒದ್ದೆ ಬಟ್ಟೆಯಲ್ಲೇ ಸ್ವಂತ ವಾಹನದಲ್ಲಿ ಮನೆಗೆ ತೆರಳಿ ಬಟ್ಟೆ ಬದಲಾಯಿಸಬೇಕಾದ ಪರಿಸ್ಥಿತಿ ಇದೆ.

ADVERTISEMENT

ಮಹಿಳೆಯರು, ಪುರುಷರಿಗೆ ತಲಾ ಒಂದು ಕೊಠಡಿ ಇದ್ದರೂ, ಅದು ಸದಾಕಾಲ ಬಾಗಿಲು ಮುಚ್ಚಿರುತ್ತದೆ. ಸಾಮಾನ್ಯ ದಿನಗಳಲ್ಲಿ ಜನರಿಗೆ ಲಭ್ಯ ಇರುವುದಿಲ್ಲ. ಸ್ಪರ್ಧೆಗಳು ಇದ್ದಾಗ ಮಾತ್ರ ಅವು ಸುಸ್ಥಿತಿಗೆ ಬರುತ್ತವೆ. ಬಟ್ಟೆ ಬದಲಾಯಿಸುವ ಕೊಠಡಿ, ಶೌಚಾಲಯದಂತಹ ಕನಿಷ್ಠ ಸೌಲಭ್ಯವನ್ನಾದರೂ ಒದಗಿಸಬೇಕು ಎಂಬುದು ಸರ್ಫರ್‌ಗಳ ಆಗ್ರಹ.

ಪಣಂಬೂರಿನಲ್ಲಿ ಜಲಕ್ರೀಡೆ:

ನಿರ್ವಹಣೆಯಿಲ್ಲದೆ ಸೊರಗಿದ್ದ ಪಣಂಬೂರು ಕಡಲತೀರಕ್ಕೆ ಮತ್ತೆ ಜೀವಕಳೆ ತುಂಬಿದೆ. ಭಂಡಾರಿ ಬಿಲ್ಡರ್ಸ್ ಮತ್ತು ಡಾ. ರಾಜೇಶ್ ಹುಕ್ಕೇರಿ ಪಾಲುದಾರಿಕೆಯಲ್ಲಿ ಇಲ್ಲಿ ಹಲವು ಜಲಕ್ರೀಡೆಗಳು ಪ್ರಾರಂಭಗೊಂಡಿವೆ. ತೇಲುವ ಸೇತುವೆ ಪ್ರಮುಖ ಆಕರ್ಷಣೆಯಾಗಿದೆ. ಇದರ ಜೊತೆಗೆ, ಪ್ಯಾರಾ ಗ್ಲೈಡಿಂಗ್, ಸ್ಪೀಡ್ ಬೋಟ್, ಬನಾನಾ ರೈಡ್, ಜೆಟ್ ಸ್ಕೀಯಿಂಗ್ ಮೊದಲಾದ ನೀರಾಟಗಳು ಪ್ರವಾಸಿಗರನ್ನು ಮುದಗೊಳಿಸುತ್ತಿವೆ. 

‘ಸ್ವಚ್ಛತೆ, ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಫುಡ್ ಕೋರ್ಟ್ ನಿರ್ಮಿಸಲಾಗುತ್ತಿದ್ದು, ಪ್ರಸ್ತುತ ಇರುವ ಅಂಗಡಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಬಟ್ಟೆ ಬದಲಾಯಿಸುವ ಕೊಠಡಿಗಳು, ಶೌಚಾಲಯಗಳು ಇವೆ. ಜೀವ ರಕ್ಷಕ ತಂಡಗಳೂ ಕಾರ್ಯ ನಿರ್ವಹಿಸುತ್ತಿವೆ. ಸಿಸಿಟಿವಿ ಕ್ಯಾಮೆರಾ, ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಪ್ರವಾಸಿಗರಿಗೆ ಟೆಂಟ್ ಹೌಸ್ ಪರಿಚಯಿಸಲಾಗಿದೆ. ಬರುವ ದಿನಗಳಲ್ಲಿ ರೆಸಾರ್ಟ್ ನಿರ್ಮಿಸಲಾಗುವುದು. ಪ್ರಚಾರದ ದೃಷ್ಟಿಯಿಂದ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಶೇರ್ ಮಾಡಲಾಗುತ್ತಿದೆ’ ಎನ್ನುತ್ತಾರೆ ನಿರ್ವಹಣೆ ನೋಡಿಕೊಳ್ಳುವ ಕಂಪನಿಯ ಪ್ರಮುಖರು.

ತಣ್ಣೀರು ಬಾವಿಯಲ್ಲಿ ಬಿದಿರು ಮನೆಯ ಆಕರ್ಷಣೆ:

ತಣ್ಣೀರು ಬಾವಿ ಕಡಲ ತೀರಕ್ಕೆ ಹೋಗುವವರಿಗೆ ವೃಕ್ಷೋದ್ಯಾನವೇ ದೊಡ್ಡ ಆಕರ್ಷಣೆಯಾಗಿತ್ತು. ಈಗ ಅಲ್ಲಿ ವೃಕ್ಷಗಳ ಜೊತೆಗೆ ಮರದ ನೆರಳಿನಲ್ಲಿ ಮೇಲೆದ್ದಿರುವ ಬಿದಿರಿನ ಪುಟ್ಟ ಮನೆಗಳು, ಕಿನಾರೆಯಲ್ಲಿ ದೊಡ್ಡ ಅಣಬೆಯಂತೆ ಕಾಣುವ ಹುಲ್ಲಿನ ಕೊಡೆಗಳು, ಆರಾಮ ಕುರ್ಚಿಗಳು ಮುದ ನೀಡುತ್ತವೆ.

ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆಯುವ ಉದ್ದೇಶದಿಂದ ತಣ್ಣೀರು ಬಾವಿ ಕಡಲ ಕಿನಾರೆಯನ್ನು ಅಂದಗೊಳಿಸಲಾಗಿದೆ. ಪುಣೆಯ ಬಿವಿಜಿ ಇಂಡಿಯಾ ಲಿಮಿಟೆಡ್‌ ಕಂಪನಿಯು ₹7.56 ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಎರಡು ವರ್ಷ ಇದೇ ಕಂಪನಿ ಬೀಚ್ ನಿರ್ವಹಣೆ ನೋಡಿಕೊಳ್ಳಲಿದೆ.

ಕಸ ನಿರ್ವಹಣೆಗೆ ಘನತ್ಯಾಜ್ಯ ನಿರ್ವಹಣೆ ಘಟಕ, ಶೌಚಾಲಯದ ತ್ಯಾಜ್ಯ ನಿರ್ವಹಣೆಗೆ ಬೂದು ನೀರು ಸಂಸ್ಕರಣಾ ಘಟಕ, ಮಹಿಳೆಯರು, ಪುರುಷರು, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ ನಿರ್ಮಿಸಲಾಗಿದೆ. ಇವನ್ನೆಲ್ಲ ಬಿದಿರಿನ ತಾತ್ಕಾಲಿಕ ಮನೆಯಂತೆ ನಿರ್ಮಿಸಿರುವುದು ಕಣ್ಸೆಳೆಯುತ್ತದೆ.

ಕಡಲ ತೀರದ ಎದುರಿನಲ್ಲಿ ಪ್ರಥಮ ಚಿಕಿತ್ಸೆ ಕೊಠಡಿ, ಸಿಸಿಟಿವಿ ಕ್ಯಾಮೆರಾ ನಿಯಂತ್ರಣ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ಎರಡು ವಾಚ್‌ ಟವರ್‌ಗಳು ತಲೆ ಎತ್ತಿವೆ. ತಿಂದು ಎಸೆದ ಪ್ಲಾಸ್ಟಿಕ್ ಪ್ಲೇಟ್, ಕವರ್‌ಗಳು, ನೀರಿನ ಬಾಟಲಿಗಳಿಂದ ಮಲಿನವಾಗಿ ಕಾಣುತ್ತಿದ್ದ ನೆರಳಿನ ಜಾಗಗಳು ಈಗ ಬಿಳಿ ಹಾಳೆಯಷ್ಟು ಶುಭ್ರವಾಗಿ ಕಾಣುತ್ತಿವೆ. ಈ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜಿಸಲಾಗಿದೆ.

ಮುಗಿಯದ ಸ್ಮಾರ್ಟ್‌ಸಿಟಿ ಕಾಮಗಾರಿ:

ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಬ್ಲೂ ಫ್ಲ್ಯಾಗ್‌ ಬೀಚ್‌ ಆವರಣದಲ್ಲಿ ಆಹಾರ ಮಳಿಗೆಗಳು ನಿರ್ಮಾಣವಾಗುತ್ತಿವೆ. ಸಮುದ್ರ ವೀಕ್ಷಣೆಗೆ ಫ್ರೇಮ್, ಶೌಚಾಲಯ ನಿರ್ಮಾಣ ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿದೆ. ‘ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕಾಗಬಹುದು’ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು.

‘ಬ್ಲೂ ಫ್ಲ್ಯಾಗ್‌ ಬೀಚ್ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಸ್ಮಾರ್ಟ್ ಸಿಟಿ ಕೆಲಸ ಮಾತ್ರ ಬಾಕಿ ಇದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಫೆಬ್ರುವರಿ ಎರಡನೇ ವಾರದಲ್ಲಿ ತಣ್ಣೀರುಬಾವಿಯಲ್ಲಿ ಗಾಳಿಪಟ್ಟ ಉತ್ಸವ ನಡೆಸಲು ಯೋಚಿಸಲಾಗಿದೆ. ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಫೆ.16ರಿಂದ ಬೀಚ್ ಫೆಸ್ಟ್ ಆಯೋಜಿತವಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಎನ್. ತಿಳಿಸಿದರು.

ರಸ್ತೆಯೇ ಶಾಪ:

ಸೋಮೇಶ್ವರ ಸಮುದ್ರ ತೀರವು ಸೌಂದರ್ಯದಿಂದ ಸೆಳೆಯುವಂತಿದ್ದರೂ, ಅದಕ್ಕೆ ರಸ್ತೆಯೇ ಶಾಪವಾಗಿದೆ. ಬೀಚ್ ತಲುಪುವ ರಸ್ತೆಯು ಪ್ರತಿವರ್ಷ ಕಡತ ಕೊರೆತಕ್ಕೆ ಸಿಲುಕಿ ಛಿದ್ರಗೊಳ್ಳುತ್ತದೆ. ರಸ್ತೆ ಸುರಕ್ಷಿತವಾದರೆ ಮಾತ್ರ ಪ್ರವಾಸಿಗರು ಇತ್ತ ಕಣ್ಣು ಹಾಯಿಸಬಹುದು.

ಬೀಗ ಹಾಕಿರುವ ಸಸಿಹಿತ್ಲು ಬೀಚ್‌ನಲ್ಲಿರುವ ಶೌಚಾಲಯ– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಸಿಹಿತ್ಲು ಬೀಚ್‌  ಸೌಂದರ್ಯಕ್ಕೆ ಧಕ್ಕೆ ತರುವ ತ್ಯಾಜ್ಯ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಸಿಹಿತ್ಲು ಬೀಚ್‌ನಲ್ಲಿ ಸರ್ಫರ್‌ಗಳು ತಾಲೀಮು ನಡೆಸುತ್ತಿರುವುದು– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ತಣ್ಣೀರುಬಾವಿ ಬೀಚ್‌ನಲ್ಲಿ ತಲೆಯೆತ್ತಿರುವ ಬಿದಿರು ಮನೆಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ತಣ್ಣೀರು ಬಾವಿ ಬೀಚ್‌ನಲ್ಲಿ ಹುಲ್ಲಿನ ಕೊಡೆಗಳ ಕೆಳಗೆ ವಿರಾಮ ಕುರ್ಚಿಗಳು ಕುಳಿತು ಪ್ರವಾಸಿಗರು ಸಮುದ್ರದ ಸೊಬಗನ್ನು ವೀಕ್ಷಿಸಬಹುದು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನೇಹಾ ಸರ್ಫರ್
ಸಸಿಹಿತ್ಲು ಬೀಚ್‌ನಲ್ಲಿ ವಸ್ತ್ರ ಬದಲಾಯಿಸುವ ಕೊಠಡಿ ಶೌಚಾಲಯದಂತಹ ಕನಿಷ್ಠ ಸೌಲಭ್ಯ ಕೊಟ್ಟರೆ ಸಾಕು ಹೆಚ್ಚೇನೂ ನಿರೀಕ್ಷೆ ಇಲ್ಲ.
ನೇಹಾ ಸರ್ಫರ್
ಮೀನಾಕ್ಷಿ ಮುಂಬೈಯಿಂದ ಪ್ರವಾಸಕ್ಕೆ ಬಂದಿದ್ದ ಯುವತಿ
ಸಸಿಹಿತ್ಲು ಬೀಚ್ ಪ್ರಶಾಂತವಾಗಿದೆ. ಮುಂಬೈ ಬೀಚ್‌ಗಳಿಗೆ ಹೋಲಿಸಿದರೆ ಸ್ವಚ್ಛತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಇಷ್ಟು ಸುಂದರ ಸ್ಥಳವನ್ನು ಅದ್ಭುತವಾಗಿ ರೂಪಿಸಬಹುದಿತ್ತು.
ಮೀನಾಕ್ಷಿ ಮುಂಬೈಯಿಂದ ಪ್ರವಾಸಕ್ಕೆ ಬಂದಿದ್ದ ಯುವತಿ
ಆನಂದ ಬಾಕಳ ಸ್ಪೀಡ್ ಬೋಟ್ ಚಾಲಕ
ಪಣಂಬೂರು ಬೀಚ್‌ನಲ್ಲಿ ವೈವಿಧ್ಯ ವಾಟರ್ ಗೇಮ್ಸ್‌ಗಳಿವೆ. ಹೀಗಾಗಿ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆನಂದ ಬಾಕಳ ಸ್ಪೀಡ್ ಬೋಟ್ ಡ್ರೈವರ್
ರಾಜು ಉದ್ಯೋಗಿ
ತಣ್ಣೀರುಬಾವಿ ಬೀಚ್‌ಗೆ ಬಂದಾಗ ಗೋವಾಕ್ಕೆ ಹೋದಷ್ಟೇ ರೋಮಾಂಚನವಾಯಿತು. ಸುಂದರವಾಗಿ ಸೃಷ್ಟಿಸಿದ ಬೀಚ್‌ ಅನ್ನು ಇದೇ ರೀತಿ ಉಳಿಸಿಕೊಳ್ಳುವುದು ಮುಖ್ಯ. ಅನತಿ ದೂರದಲ್ಲಿರುವ ಪಾರ್ಕ್ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ.
ರಾಜು ಉದ್ಯೋಗಿ

ಟೂರಿಸಂ ಪ್ರಮೋಷನ್ ಕೌನ್ಸಿಲ್:

ಡಿಸಿ ಜಿಲ್ಲೆಯ ಕಡಲ ತೀರಗಳ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಟೂರಿಸಂ ಪ್ರಮೋಷನ್ ಕೌನ್ಸಿಲ್ ರಚನೆಗೆ ಯೋಚಿಸಲಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಬೀಚ್ ಫೆಸ್ಟಿವಲ್ ಸಾಮಾಜಿಕ ಜಾಲತಾಣಗಳ ಮೂಲಕ ಇವುಗಳ ಪ್ರಚಾರ ಸೇರಿದಂತೆ ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಇದೇ ತಿಂಗಳಲ್ಲಿ ಉದ್ಘಾಟನೆ ನಡೆಸಲು ಯೋಚಿಸಲಾಗಿದೆ. ಬ್ಲೂ ಫ್ಲ್ಯಾಗ್‌ ಮಾನ್ಯತೆ ಪಡೆಯಲು ಮೇ ತಿಂಗಳ ವೇಳೆಗೆ ಅರ್ಜಿ ಸಲ್ಲಿಸಲಾಗುತ್ತದೆ. ಇಲ್ಲಿನ ಮಾನದಂಡಗಳು ಸಮರ್ಪಕವಾಗಿದ್ದಲ್ಲಿ ಮಾನ್ಯತೆ ದೊರೆಯುತ್ತದೆ. ಪಣಂಬೂರು ಹಳೆ ವೈಭವಕ್ಕೆ ಮರಳಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚುವ ಭರವಸೆ ಇದೆ. ಸಸಿಹಿತ್ಲು ಬೀಚ್‌ ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಜಂಗಲ್‌ ಲಾಡ್ಜಸ್‌ ಮೂಲಕ ರೆಸಾರ್ಟ್‌ ನಿರ್ಮಾಣಕ್ಕೆ ₹ 5.36 ಕೋಟಿ ಮಂಜೂರಾಗಿದೆ. ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಸದ್ಯದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಬೀಚ್ ಅನ್ನು ಮುಸ್ಸಂಜೆಯ ನಂತರ ರಾತ್ರಿ ನಿಗದಿತ ಅವಧಿವರೆಗೆ ಪ್ರವಾಸಿಗರಿಗೆ ಮುಕ್ತಗೊಳಿಸುವಂತೆ ಬೇಡಿಕೆ ಇದ್ದು ಇದನ್ನು ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

‘ನಿರಂತರ ಚಟುವಟಿಕೆ; ಪ್ರಚಾರಕ್ಕೆ ಸಹಕಾರಿ’
ಕಡಲ ತೀರದಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿದ್ದರೆ ಸಹಜವಾಗಿ ಆ ಪ್ರದೇಶ ಆನ್‌ಲೈನ್ ಸರ್ಚ್‌ನಲ್ಲಿ ಮೊದಲು ಲಭ್ಯವಾಗುತ್ತದೆ. ಅಲ್ಲಿಗೆ ಬರುವ ಪ್ರವಾಸಿಗರು ಚಿತ್ರಗಳು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆ ಪ್ರದೇಶದ ಹೆಸರು ಆನ್‌ಲೈನ್‌ನಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ. ಕೋವಿಡ್ ನಂತರ ಕಡಲ ತೀರದಲ್ಲಿ ನಡೆಯುವ ಉತ್ಸವಗಳು ಗಣನೀಯವಾಗಿ ಇಳಿಕೆಯಾಗಿವೆ. ಬೀಚ್ ಫೆಸ್ಟ್ ಫುಡ್ ಫೆಸ್ಟ್ ಗಾಳಿಪಟ ಉತ್ಸವ ಇಂತಹ ಹತ್ತಾರು ಚಟುವಟಿಕೆಗಳು ನಡೆಯುತ್ತಿರಬೇಕು ಎನ್ನುತ್ತಾರೆ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯತೀಶ್ ಬೈಕಂಪಾಡಿ. ಚಟುವಟಿಕೆ ಆಧಾರಿತ ಪ್ರಚಾರ ಹೆಚ್ಚು ಪರಿಣಾಮಕಾರಿ. ಹೀಗಾಗಿ ಸಮುದ್ರ ಕಿನಾರೆಗಳಲ್ಲಿ ನಡೆಯುವ ಕಾರ್ಯಕ್ರಮಗಳು ಬ್ರ್ಯಾಂಡ್ ಸೃಷ್ಟಿಸಲು ಸಹಕಾರಿಯಾಗುತ್ತವೆ. ಜೊತೆಗೆ ನೈಟ್ ಸಫಾರಿ ಬೆಳದಿಂಗಳ ಊಟದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇವೆಲ್ಲಕ್ಕೂ ಅವಕಾಶವಾಗಲು ಮುಖ್ಯವಾಗಿ ಬೆಳಕಿನ ವ್ಯವಸ್ಥೆ ಬೇಕಾಗುತ್ತದೆ. ರಾತ್ರಿ ನಿರಂತರ ವಿದ್ಯುತ್ ಅನ್ನು ಆಡಳಿತವೇ ಒದಗಿಸುವಂತಾಗಬೇಕು. ಕಡಲತೀರಗಳಲ್ಲಿ ಉತ್ಪತ್ತಿಯಾಗುವ ಕಸ ದೈನಂದಿನ ನೆಲೆಯಲ್ಲಿ ನಿರ್ವಹಣೆಯಾದರೆ ಸ್ವಚ್ಛ ಕಿನಾರೆ ಕಲ್ಪನೆ ಸಾಕಾರವಾಗುತ್ತದೆ ಎಂಬುದು ಅವರ ಸಲಹೆ. ಕೆನರಾ ಚೇಂಬರ್ ಆಫ್ ಕಾಮರ್ಸ್ ‘ಎಲಿವೇಟ್ ಮಂಗಳೂರು’ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದರ ಮೊದಲ ಆದ್ಯತೆ ನಿಗದಿತ ಉದ್ಯಮಗಳ ಅವಧಿ ವಿಸ್ತರಣೆ ಮಾಡುವುದಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

‘ನಸುಗತ್ತಲ ಸೊಬಗು ಸವಿಯಲು ಅವಕಾಶವಾಗಲಿ’

‘ತಿಂಗಳ ಬೆಳಕಿನಲ್ಲಿ ಅಲೆಗಳ ನರ್ತನ ಆನಂದಿಸುತ್ತ ಕಡಲ ಕಿನಾರೆಯಲ್ಲಿ ನಡೆದಾಡುವುದು ವಿಶಿಷ್ಟ ಅನುಭವ. ಈ ಖುಷಿಗಾಗಿಯೇ ಪ್ರವಾಸಿಗರು ಹಾತೊರೆಯುತ್ತಾರೆ. ಆದರೆ ಇಲ್ಲಿನ ಹೆಚ್ಚಿನ ಬೀಚ್‌ಗಳಲ್ಲಿ ಸಂಜೆ ಏಳು ಗಂಟೆಯ ನಂತರ ನಿಂತರೆ ಪೊಲೀಸರು ಜನರನ್ನು ಓಡಿಸುತ್ತಾರೆ. ಇದು ಮೊದಲು ನಿಲ್ಲಬೇಕು. ರಾತ್ರಿ ವೇಳೆಯ ಸಂಚಾರಕ್ಕೆ ಬೀಚ್‌ಗಳು ಮುಕ್ತಗೊಳ್ಳಬೇಕು. ಜನರು ನೀರಿಗಿಳಿಯದಂತೆ ಗಮನಿಸಲು ರಕ್ಷಣಾ ವ್ಯವಸ್ಥೆ ಅಕ್ರಮ ಚಟುವಟಿಕೆಗೆ ಅವಕಾಶವಾಗದಂತೆ ಕಾವಲು ಪೂರ್ಣ ಪ್ರಮಾಣದ ವಿದ್ಯುದ್ದೀಪಗಳ ವ್ಯವಸ್ಥೆಯಾದರೆ ಬೀಚ್‌ಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವುದರಲ್ಲಿ ಅನುಮಾನವಿಲ್ಲ’ ಎಂಬುದು ಪ್ರವಾಸೋದ್ಯಮ ಆಧಾರಿತ ಉದ್ದಿಮೆಗಳ ಪ್ರಮುಖರ ಅಂಬೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.