ಸುಳ್ಯ: ವಿದೇಶಿ ಆಡಳಿತದ ವಿರುದ್ಧ ದೇಶದಲ್ಲೇ ಮೊದಲ ಬಾರಿ ನಡೆದ ರೈತ ದಂಗೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. ಮೊದಲ ಸ್ವಾತಂತ್ರ್ಯ ಸಂಗ್ರಾಮ(1857)ಕ್ಕಿಂತಲೂ ಎರಡು ದಶಕಕ್ಕೂ ಮೊದಲೇಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹೋರಾಟದ ಕಿಡಿ ಪ್ರಜ್ವಲಿಸಿತ್ತು.
ಈಗಿನ ಬೆಳ್ಳಾರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣ ಬದಿಯ ‘ಬಂಗ್ಲೆಗುಡ್ಡೆ’ಯಲ್ಲಿನ ಕೋಟೆಯ ಮೇಲೆ ಖಜಾನೆ ಇತ್ತು. 1837ರಲ್ಲಿ ರೈತ ದಂಗೆಯ ಮೂಲಕ ಬ್ರಿಟಿಷರಿಂದ ಈ ಖಜಾನೆಯನ್ನು ವಶಪಡಿಸಲಾಗಿದೆ. ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆ 37 ಗ್ರಾಮಗಳು ದೊಡ್ಡವೀರ ರಾಜೇಂದ್ರರ ವಶಕ್ಕೆ ಬ್ರಿಟಿಷರು ನೀಡಿದ್ದರು. ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನ ದುರಾಡಳಿತದಿಂದಾಗಿ 1834ರಲ್ಲಿ ಬ್ರಿಟಿಷರು ಅವರನ್ನು ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ ಸುಳ್ಯ, ಪಂಜ ಸೀಮೆಯ 110 ಗ್ರಾಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು.
ವಸ್ತು ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ನಗದು ರೂಪಕ್ಕೆ ಬದಲಾಯಿಸಿದರು. ಇದು ರೈತ ವಿರೋಧಿ ನೀತಿ ಆಗಿತ್ತು. ಇದರ ಪ್ರತಿಫಲವಾಗಿ ಹೋರಾಟ ನಡೆದಿದ್ದು, ಬ್ರಿಟಿಷರು ‘ಕಲ್ಯಾಣಪ್ಪನ ಕಾಟುಕಾಯಿ’ ಎಂದು ಕರೆದರು.
ರೈತರೆಲ್ಲ ಕೆದಂಬಾಡಿ ರಾಮೇಗೌಡ, ಕೂಜುಗೋಡು ಮಲ್ಲಪ್ಪ ಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು. ಪುಟ್ಟ ಬಸಪ್ಪನೆಂಬ ಅವರನ್ನು ‘ಕಲ್ಯಾಣಸ್ವಾಮಿ’ ಎಂದು ಕರೆದು, ಈತ ಕೊಡಗಿನ ಅರಸರ ವಂಶದವನು ಎಂದು ಜನರನ್ನು ನಂಬಿಸಿದರು. 1837ರ ಮಾರ್ಚ್ 30ರಂದು ಬೆಳ್ಳಾರೆಗೆ ಮುತ್ತಿಗೆ ಹಾಕಿದರು. ಮೊದಲಿಗೆ ಬೆಳ್ಳಾರೆ ಖಜಾನೆಯನ್ನು ವಶಪಡಿಸಿಕೊಂಡರು. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಹುಲಿಕಡಿದ ನಂಜಯ್ಯ ಎಂಬಾತ ಈ ದಂಗೆಯ ಮಾಸ್ಟರ್ ಮೈಂಡ್ ಆಗಿದ್ದರು.
ಇದು ಅಮರ ಮತ್ತು ಸುಳ್ಯ ಸೀಮೆಗಳ ರೈತರು ಬ್ರಿಟಿಷರ ಕಂದಾಯ ವ್ಯವಸ್ಥೆಯ ವಿರುದ್ಧ ನಡೆಸಿದ ಬಂಡಾಯ. ಪಾಲ್ಗೊಂಡ ಪ್ರಮುಖರಲ್ಲಿ ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ, ಪುಟ್ಟಬಸವ, ಹುಲಿಕಡಿದ ನಂಜಯ್ಯ, ಕೆದಂಬಾಡಿ ರಾಮ ಗೌಡ, ಗುಡ್ಡೆಮನೆ ಅಪ್ಪಯ್ಯ ಮತ್ತು ತಮ್ಮಯ್ಯ, ಕೂಜುಗೋಡು ಮಲ್ಲಪ್ಪ ಮತ್ತು ಅಪ್ಪಯ್ಯ, ಪೆರಾಜೆ ಊಕಣ್ಣ ಮತ್ತು ವೀರಣ್ಣ ಬಂಟ, ಚೆಟ್ಟಿ ಮತ್ತು ಕರ್ತು ಕುಡಿಯ, ಕುಂಚಡ್ಕ ತಿಮ್ಮ ಮತ್ತು ಕುಡೆಕಲ್ಲು ಪುಟ್ಟ, ಅಟ್ಲೂರು ರಾಮಪ್ಪಯ್ಯ ಮೊದಲಾದವರು ಇದ್ದರು. ಹೀಗಾಗಿ ಇದನ್ನು ಅಮರ ಸುಳ್ಯ ಕ್ರಾಂತಿ ಎಂದೂ ಕರೆಯುತ್ತಾರೆ.
ರೈತರು ಬೆಳ್ಳಾರೆಯಿಂದ ಮಂಗಳೂರುವರೆಗೆ ಸಾಗಿ 1837 ಏಪ್ರಿಲ್ 5ರಂದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಕ್ರಾಂತಿ ಧ್ವಜವನ್ನು ಹಾರಿಸಿ ವಸಾಹತುಶಾಹಿ ಆಡಳಿತವನ್ನು ಕೊನೆಗಾಣಿಸಿದರು. ಸುಳ್ಯದಲ್ಲಿ ಕೆಲವೇ ಜನರಿಂದ ಆರಂಭಗೊಂಡ ಹೋರಾಟ ಮಂಗಳೂರು ತಲುಪುವಾಗ ಸಾವಿರರಾರು ಜನ ಸೇರಿಕೊಂಡಿದ್ದರು.
ಆದರೆ, 13 ದಿನಗಳ ಬಳಿಕ ಮುಂಬೈ- ಕಣ್ಣನೂರುಗಳಿಂದ ಬಂದ ಬೃಹತ್ ಬ್ರಿಟಿಷ್ ಪಡೆಯನ್ನು ಎದುರಿಸಲಾಗದೆ ಸೋತು ಹೋದರು. ದಂಗೆಯ ನಾಯಕರುಗಳನ್ನು ಗಲ್ಲು ಶಿಕ್ಷೆ ಅಥವಾ ಕಠಿಣ ಶಿಕ್ಷೆಗೆ ಗುರಿಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.