ಉಜಿರೆ: ರೋಟರಿ ಸದಸ್ಯರು ಉತ್ತಮ ಸಂಸ್ಕಾರ ಮತ್ತು ಬದ್ಧತೆಯೊಂದಿಗೆ ದೀನ, ದಲಿತರ ನಿಸ್ವಾರ್ಥ ಸೇವೆ ಮಾಡಬೇಕು ಎಂದು ಮೈಸೂರಿನ ಉದ್ಯಮಿ ಎಚ್.ಆರ್. ಕೇಶವ ಹೇಳಿದರು.
ಗುರುವಾರ ಉಜಿರೆಯಲ್ಲಿ ರೋಟರಿ ಸುವರ್ಣ ಸಭಾಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷೆ ಮನೋರಮಾ ಭಟ್ ಮತ್ತು ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆಧುನಿಕ ತಂತ್ರಜ್ಞಾನವನ್ನು ಬಳಸಿ ನಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು. ಆದರ್ಶ ನಾಯಕತ್ವದೊಂದಿಗೆ ನೈತಿಕತೆಯನ್ನು ಕಾಪಾಡಿಕೊಂಡು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಸಮಾಜ ಸೇವೆ ಮಾಡಬೇಕು. ಉದಾರ ದಾನಿಗಳಾಗಿ, ಹೃದಯ ಶ್ರೀಮಂತಿಕೆಯೊಂದಿಗೆ ಸಮಾಜ ಸೇವೆ ಮಾಡಿ ರೋಟರಿ ಕ್ಲಬ್‌ನ ಘನತೆ ಹೆಚ್ಚಿಸಬೇಕು’ ಎಂದರು.
ಮನೋರಮಾ ಭಟ್ ಮಾತನಾಡಿ, ‘ಸೃಜನಶೀಲವಾದ ಸಮಾಜಮುಖಿ ಕಾರ್ಯಗಳ ಮೂಲಕ ಸರ್ವರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಉತ್ತಮ ಸೇವೆ ನೀಡುತ್ತೇನೆ. ಜಲಸಿರಿ, ವನಸಿರಿ, ಆರೋಗ್ಯಸಿರಿ ಮೊದಲಾದ ಯೋಜನೆಗಳ ಮೂಲಕ ಸೇವಾಕಾರ್ಯಗಳನ್ನು ರೂಪಿಸಲಾಗುವುದು’ ಎಂದು ಅವರು ಹೇಳಿದರು.
‘ರೋಟರ್’ ಸಂಚಿಕೆಯನ್ನು ಎಚ್.ಆರ್. ಕೇಶವ ಬಿಡುಗಡೆಗೊಳಿಸಿದರು. ಅಬೂಬಕ್ಕರ್ ವರದಿ ವಾಚಿಸಿದರು. ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ಕಾರ್ಯದರ್ಶಿ ರಕ್ಷಾ ರಾಗ್ನೇಶ್ ಧನ್ಯವಾದವಿತ್ತರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಸಿಂಹ ನಾಯಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.