ADVERTISEMENT

ಕೆಡುಕು, ಮನುಷ್ಯತ್ವದ ಅಭಿವ್ಯಕ್ತಿಯೇ ಸಾಹಿತ್ಯ: ಪೂವಪ್ಪ ಕಣಿಯೂರು

ಬೆಳ್ತಂಗಡಿ ತಾಲ್ಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 13:29 IST
Last Updated 18 ಡಿಸೆಂಬರ್ 2023, 13:29 IST
ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ತಾಲ್ಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಬೆಳ್ತಂಗಡಿಯ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ತಾಲ್ಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಬೆಳ್ತಂಗಡಿ: ‘ಕೆಡುಕು ಮತ್ತು ಮನುಷ್ಯತ್ವದ ಅಭಿವ್ಯಕ್ತಿಯೇ ಸಾಹಿತ್ಯ. ಸಾಹಿತ್ಯ ಜನರ ಧ್ವನಿಯಾದಾಗ, ವರ್ತಮಾನದ ಪ್ರತಿಬಿಂಬವಾದಾಗ ಅದಕ್ಕೆ ಮಹತ್ವವಿರುತ್ತದೆ’ ಎಂದು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪೂವಪ್ಪ ಕಣಿಯೂರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲ್ಲೂಕು ಘಟಕದಿಂದ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದ ರಮಾನಂದ ಸಾಲಿಯಾನ್ ವೇದಿಕೆಯಲ್ಲಿ ಸುವರ್ಣ ಕರ್ನಾಟಕ ಭಾಷೆ - ಸಾಹಿತ್ಯ- ಸಂಸ್ಕೃತಿ ಆಶಯದಲ್ಲಿ ನಡೆದ ಬೆಳ್ತಂಗಡಿ ತಾಲ್ಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.

ಮೌಖಿಕ ಅಥವಾ ಅಕ್ಷರ ಪರಂಪರೆಯಾಗಿರುವ ಸಾಹಿತ್ಯ ಸೃಷ್ಟಿಯಾಗಿರುವುದು ನೋವಿನಲ್ಲಿ. ಆದಿಕಾವ್ಯ ರಾಮಾಯಣವಿರಲಿ, ಕೋಟಿ ಚೆನ್ನಯ ವಿಚಾರವೂ ನೋವಿನ ಪ್ರತಿಬಿಂಬವಾಗಿದೆ. ಸಾಹಿತ್ಯದ ವಿಚಾರವನ್ನು ಮತ್ತೆ ಸಮಕಾಲೀನತೆಗೆ ಹೊಂದಿಸುವ ಕೆಲಸವಾಗಬೇಕು. ಇಂದು ಸಾಹಿತ್ಯವನ್ನು ಓದುವ ಸಂಸ್ಕೃತಿ ಹಿಂದಕ್ಕೆ ಉಳಿದು ಸೋತಿದೆ. ಕೃತಕ ಬುದ್ಧಿಮತ್ತೆಯ ಅನುಕೂಲಕ್ಕಿಂತ ಹೆಚ್ಚು ಅನಾಹುತ ಮಾಡಬಹುದು ಎಂದು ಅವರು ವಿಶ್ಲೇಷಿಸಿದರು.

ADVERTISEMENT

ಸಮ್ಮೇಳನದ ಅಧ್ಯಕ್ಷ ಪ್ರೊ.ಎ.ಕೃಷ್ಣಪ್ಪ ಪೂಜಾರಿ ಸಮಾರೋಪ ನುಡಿಗಳನ್ನಾಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿ, ‘18ನೇ ಸಾಹಿತ್ಯ ಸಮ್ಮೇಳನ ಯುವ ಪ್ರತಿಭೆಯ ವೇದಿಕೆಯಾಗಿ ಹೊರಹೊಮ್ಮಿದೆ. ಮಾರ್ಚ್‌ನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನೆರವೇರಲಿದೆ’ ಎಂದು ಘೋಷಿಸಿದರು.

ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಎಚ್.ಪದ್ಮ ಗೌಡ, ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಶುಭಹಾರೈಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಡಾ.ಕೆ.ಎಂ.ಶೆಟ್ಟಿ ಬಳ್ಳಮಂಜ, ದೇಶಸೇವೆಗಾಗಿ ಗೋಪಾಲಕೃಷ್ಣ ಭಟ್ ಕಾಂಚೋಡು, ನಾಟಿ ವೈದ್ಯ ಕ್ಷೇತ್ರದ ಬೇಬಿ ಪೂಜಾರಿ, ಶಿಕ್ಷಣ ಕ್ಷೇತ್ರದಲ್ಲಿ ಎನ್.ಎಂ.ಜೋಸೆಫ್, ಜನಪದ ವಸ್ತು ಸಂಗ್ರಾಹಕ ಹೈದರಾಲಿ ಹಳ್ಳಿಮನೆ ಅವರನ್ನು ಸನ್ಮಾನಿಸಲಾಯಿತು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ, ಸಮ್ಮೇಳನ ಸಂಯೋಜನಾ ಸಮಿತಿಯ ಅಧ್ಯಕ್ಷ ಜಯಾನಂದ ಗೌಡ ಅವರನ್ನು ಸನ್ಮಾನಿಸಲಾಯಿತು.

‌ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸಮಿತಿ ಸದಸ್ಯ ಎಂ.ಕೆ.ಮಾಧವ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಾಜೇಶ್ವರಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಗೌರವ ಕಾರ್ಯದರ್ಶಿ ಪ್ರಮೀಳಾ, ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಮಂಗಳೂರು ಘಟಕದ ಮಂಜುನಾಥ್ ಎಸ್.ರೇವಣ್ಕರ್, ಕೋಶಾಧಿಕಾರಿ ಮೀನಾಕ್ಷಿ ಎನ್.ಗುರುವಾಯನಕೆರೆ ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿದರು. ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು ವಂದಿಸಿದರು. ಸಂಯೋಜನಾ ಸಮಿತಿ ಕಾರ್ಯದರ್ಶಿ ವಿಷ್ಣು ಪ್ರಕಾಶ ಎಂ.ನಿರೂಪಿಸಿದರು.

ಸಮಾರೋಪದ ಬಳಿಕ ಕಲಾಮಯಂ ಉಡುಪಿ ಅವರಿಂದ ಜಾನಪದ ವೈಭವ ಪ್ರಸ್ತುತಿಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.