ADVERTISEMENT

ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ: ಐವರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:08 IST
Last Updated 28 ಸೆಪ್ಟೆಂಬರ್ 2021, 16:08 IST
   

ಸುರತ್ಕಲ್‌: ಮಂಗಳೂರಿನ ವೈದ್ಯಕೀಯ ಕಾಲೇಜ್‌ ಒಂದರ ವಿದ್ಯಾರ್ಥಿಗಳು ಮಲ್ಪೆ ಬೀಚ್‌ಗೆ ಪ್ರವಾಸ ಹೋಗಿ ವಾಪಸ್‌ ಬರುತ್ತಿದ್ದ ವೇಳೆ ಬಜರಂಗ ದಳದ ಕಾರ್ಯಕರ್ತರು ಅವರ ವಾಹನ ತಡೆದು, ಒಳಗೆ ಕುಳಿತಿದ್ದವರ ಮೇಲೆ ಹಲ್ಲೆಗೆ ಯತ್ನಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೇರೆಬೇರೆ ಸಮುದಾಯಗಳ ವಿದ್ಯಾರ್ಥಿ– ವಿದ್ಯಾರ್ಥಿನಿಯರು ಈ ವಾಹನದಲ್ಲಿ ಇದ್ದರೆನ್ನಲಾಗಿದ್ದು, ಸುರತ್ಕಲ್ ಟೋಲ್‌ಗೇಟ್ ಬಳಿ ಭಾನುವಾರ ಸಂಜೆ ವೇಳೆಗೆ, ಬಜರಂಗ ದಳದಸ್ಥಳೀಯ ಕಾರ್ಯಕರ್ತರು ವಾಹನ ಅಡ್ಡಗಟ್ಟಿದ್ದಾರೆ. ಹಲ್ಲೆ ನಡೆಸಲು ಮುಂದಾದಾಗ ಸ್ಥಳದಲ್ಲಿ ಇದ್ದ ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶರೀಫ್ ಅವರು ತಡೆದಿದ್ದರಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ. ವಾಹನಕ್ಕೆ ಮುತ್ತಿಗೆ ಹಾಕಿದ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ನಿಂದಿಸುತ್ತಿರುವ ದೃಶ್ಯದ ತುಣುಕು ವೈರಲ್ ಆಗಿರುವ ವಿಡಿಯೊದಲ್ಲಿದೆ.

ಘಟನೆ ಸಂಬಂಧ ಬಜರಂಗದ ದಳದ ಪ್ರಮುಖರಾದ ಪ್ರೀತಂ ಶೆಟ್ಟಿ, ಅರ್ಶಿತ್, ಶ್ರೀನಿವಾಸ್, ರಾಕೇಶ್, ಅಭಿಷೇಕ್ ಎಂಬುವವರನ್ನು ಮಂಗಳವಾರ ಬಂಧಿಸಿ, ಬಿಡುಗಡೆಗೊಳಿಸಲಾಗಿದೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಶಕ್ತಿಗಳ ಇಂತಹ ಗೂಂಡಾಗಿರಿ ಇದೇನು ಹೊಸತಲ್ಲ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜಾಮೀನು ಸಿಗದ ಕಠಿಣ ಸೆಕ್ಷನ್ ದಾಖಲಿಸಿ, ಆರೋಪಿಗಳನ್ನು ಮತ್ತೆ ಬಂಧಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.