ADVERTISEMENT

ಲಾಂಗ್‌ ಜಂಪ್‌: ಮಂಗಳೂರು ವಿವಿಯಲ್ಲಿ ಇತಿಹಾಸ ಸೃಷ್ಟಿಸಿದ ಆಳ್ವಾಸ್‌ ವಿದ್ಯಾರ್ಥಿನಿ

ವಿಕ್ರಂ ಕಾಂತಿಕೆರೆ
Published 4 ಆಗಸ್ಟ್ 2023, 2:37 IST
Last Updated 4 ಆಗಸ್ಟ್ 2023, 2:37 IST
ಪದಕದೊಂದಿಗೆ ಸಂಭ್ರಮಿಸಿದ ಭವಾನಿ ಯಾದವ್ ಭಗವತಿ
ಪದಕದೊಂದಿಗೆ ಸಂಭ್ರಮಿಸಿದ ಭವಾನಿ ಯಾದವ್ ಭಗವತಿ   

ಮಂಗಳೂರು: ಮೊದಲ ಪ್ರಯತ್ನದಲ್ಲೇ ವೈಫಲ್ಯ. ನಂತರ ಚೇತರಿಸಿಕೊಂಡರೂ ನಿರೀಕ್ಷೆಗೆ ತಕ್ಕ ಫಲಿತಾಂಶ ಸಿಗದ ಕೊರಗು. ಆದರೂ ಛಲ ಕೈಬಿಡದ ಭವಾನಿ ಯಾದವ್ ಭಗವತಿ ಕೊನೆಯ ಪ್ರಯತ್ನದಲ್ಲಿ ಅಮೋಘ ಸಾಧನೆಯೊಂದಿಗೆ ಪದಕಕ್ಕೆ ಮುತ್ತಿಕ್ಕಿದರು.

ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಪದಕ ಗೆದ್ದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ನಿರ್ಮಿಸಿದ ಭವಾನಿ ಯಾದವ್ ಈ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೂರನೇ ಅಥ್ಲೀಟ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 

‘ದತ್ತು ಸ್ವೀಕಾರ ಯೋಜನೆ’ಯಡಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಬಾರಿ ಸೇರ್ಪಡೆಗೊಂಡ ಆಂಧ್ರಪ್ರದೇಶದ ವಿಜಯವಾಡದ ಭವಾನಿ ಇಲ್ಲಿಗೆ ಬಂದು ಒಂದೇ ವರ್ಷದಲ್ಲಿ ಪದಕದ ಸಾಧನೆ ಮಾಡಿದ್ದರು. ಕಳೆದ ಜುಲೈನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ 6.44 ಮೀಟರ್ ಸಾಧನೆಯೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ADVERTISEMENT

ಈ ಬಾರಿ ಭಾರತರಿಂದ ತೆರಳಿದ ಒಟ್ಟು 85 ಕ್ರೀಡಾಪಟುಗಳಲ್ಲಿ ಮಂಗಳೂರು ವಿವಿಯ ಒಂಬತ್ತು ಮಂದಿ ಇದ್ದಾರೆ. ಲಾಂಗ್‌ಜಂಪ್‌ನ ಅರ್ಹತಾ ಸುತ್ತಿನಲ್ಲಿ ಭಾರತದ ಮೆರಾಲ್ ಮನೀಶಾ ಹೊರಬಿದ್ದ ನಂತರ ಭವಾನಿ ಒಬ್ಬರೇ ಭಾರತದ ಭರವಸೆಯಾಗಿದ್ದರು. ಶಿವಾಂಗ್‌ಲಿಯು ಕ್ರೀಡಾಕೇಂದ್ರದಲ್ಲಿ ಬುಧವಾರ ಸಂಜೆಗತ್ತಲಲ್ಲಿ ನಡೆದ ಫೈನಲ್‌ನಲ್ಲಿ ಪೋಲೆಂಡ್‌ನ ನಿಕೋಲಾ ಹೊರೊವೊಸ್ಕ ಮತ್ತು ಮಗ್ದಲಿನಾ ಬೊಕುನ್ ಅವರು ಅಮೋಘ ಸಾಧನೆಯೊಂದಿಗೆ ಆರಂಭದಲ್ಲೇ ಮಿಂಚಿದ್ದರು. 6.60 ಮೀ ಮತ್ತು 6.41 ಮೀ ಸಾಧನೆಯೊಂದಿಗೆ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು.

ಮೊದಲ ನಾಲ್ಕು ಪ್ರಯತ್ನಗಳಲ್ಲಿ ಭವಾನಿ ಅವರ ಗರಿಷ್ಠ ಸಾಧನೆ 6.24 ಮೀ ಆಗಿತ್ತು. ಅಷ್ಟರಲ್ಲಿ ಜರ್ಮನಿಯ ಮಿರ್ಲೆ ಹೋಮಿಯರ್ (6.29 ಮೀ) ಮತ್ತು ಚೀನಾದ ಶಿಜಿಯಾ (6.24 ಮೀ) ಅವರು ಭವಾನಿಗೆ ಸವಾಲಾಗಿದ್ದರು. ಹೀಗಾಗಿ ಉಳಿದೆರಡು ಪಯತ್ನಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಅನಿವಾರ್ಯ ಸ್ಥಿತಿ ಉಂಟಾಗಿತ್ತು. ಐದನೇ ಪ್ರಯತ್ನದಲ್ಲಿ ನಿರೀಕ್ಷೆ ಕೈಗೂಡಲಿಲ್ಲ. ಆದರೆ ಅಂತಿಮ ಪ್ರಯತ್ನದಲ್ಲಿ ಭರ್ಜರಿ ಜಿಗಿತದೊಂದಿಗೆ ಮಿಂಚಿದರು.

‘ಪಿಜಿಡಿಬಿಎಂ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿರುವ ಭವಾನಿ ಕ್ರೀಡೆಯಲ್ಲಿ ಪ್ರತಿಭಾವಂತೆ. ಆಕೆಗೆ ಇನ್ನೂ ಭವಿಷ್ಯವಿದೆ. ಲ್ಯಾಂಡಿಂಗ್‌ನಲ್ಲಿ ಸ್ವಲ್ಪ ಸಮಸ್ಯೆ ಇರುವುದನ್ನು ಸರಿಪಡಿಸಿಕೊಂಡರೆ ಭಾರತದ ಮತ್ತೊಬ್ಬರು ಅಂಜು ಬಾಬಿ ಜಾರ್ಜ್ ಆಗುವ ಎಲ್ಲ ಸಾಧ್ಯತೆಗಳೂ ಇವೆ’ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಥ್ಲೆಟಿಕ್ ಕೋಚ್‌ ಅಜಿತ್ ಕುಮಾರ್ ಅಭಿಪ್ರಾಯಪಟ್ಟರು.

ಲಾಂಗ್‌ಜಂಪ್‌ನ ದ್ರೋಣಾಚಾರ್ಯ

ಭವಾನಿ ಅವರ ಕೋಚ್‌, ತಿರುವನಂತಪುರದ ಅಜಿತ್ ಕುಮಾರ್ ಸದ್ಯ ಭಾರತದ ಮಹಿಳಾ ಲಾಂಗ್‌ಜಂಪ್‌ನಲ್ಲಿ ಮಿಂಚುತ್ತಿರುವ ಪ್ರಮುಖರಿಗೆ ತರಬೇತಿ ನೀಡಿ, ಲಾಂಗ್‌ಜಂಪ್‌ನ ದ್ರೋಣಾಚಾರ್ಯ ಎನಿಸಿಕೊಂಡಿದ್ದಾರೆ. ಏಷ್ಯನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ ಮತ್ತು ಏಷ್ಯನ್ ಒಳಾಂಗಣ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವ ನಯನಾ ಜೇಮ್ಸ್‌, ವಿಶ್ವ ರೈಲ್ವೆ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿರುವ ರಿಂಟು ಮ್ಯಾಥ್ಯೂ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿರುವ ಶ್ರುತಿ ಲಕ್ಷ್ಮಿ, ಅಜಿತ್‌ ಅವರ ಶಿಷ್ಯಂದಿರು. ಇವರೆಲ್ಲರೂ ಆಳ್ವಾಸ್ ಕಾಲೇಜಿನಲ್ಲೇ ಅಭ್ಯಾಸ ಮಾಡಿದ್ದರು. 

100 ಮತ್ತು 200 ಮೀಟರ್ಸ್ ಓಟಗಾರ ಅಜಿತ್ ಭಾರತ ನೌಕಾದಳದಲ್ಲಿದ್ದರು. ರಾಷ್ಟ್ರೀಯ ಕೂಟದ ಪದಕ ವಿಜೇತರೂ ಆಗಿದ್ದಾರೆ.

ರಾಷ್ಟ್ರೀಯ ಕೂಟದಲ್ಲಿ ಪದಕ ಗೆದ್ದಾಗ ಕೋಚ್‌ ಅಜಿತ್ ಕುಮಾರ್ ಜೊತೆ ಭವಾನಿ ಯಾದವ್ ಭಗವತಿ
ಪದಕ ಗೆದ್ದ ನಂತರ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ಭವಾನಿ ಯಾದವ್ ಭಗವತಿ
ಭವಾನಿ ಪದಕ ಗೆದ್ದಿರುವುದು ಹೆಮ್ಮೆಯ ವಿಷಯ. ಜಾಗತಿಕ ವಿಶ್ವವಿದ್ಯಾಲಯ ಕೂಟದಲ್ಲಿ ಪಾಲ್ಗೊಳ್ಳುವ ಕನಸು ನನಸಾಗುವುದು ಸುಲಭವಲ್ಲ. ಭವಾನಿ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.
–ಜೆರಾಲ್ಡ್‌ ಡಿಸೋಜ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ
ಅರ್ಪಣಾ ಮನೋಭಾವವೇ ಭವಾನಿ ಯಶಸ್ಸಿನ ಗುಟ್ಟು. ಅಭ್ಯಾಸದಲ್ಲಿ ಉದಾಸೀನ ಮಾಡದೆ ನಿರಂತರ ಪ್ರಯತ್ನದಲ್ಲಿ ತೊಡಗುತ್ತಿರುವ ಅವರಿಗೆ ಇನ್ನಷ್ಟು ನೆರವು ನೀಡಲು ಬದ್ಧರಾಗಿದ್ದೇವೆ.
–ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸ್ಥಾಪಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.