ಉಪ್ಪಿನಂಗಡಿ: ಇಲ್ಲಿನ ನೆಕ್ಕಿಲಾಡಿಯಲ್ಲಿರುವ ಕುಮಾರಧಾರಾ ಸೇತುವೆಯ ಮೇಲೆ ಕೆಸರು ತುಂಬಿದ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದು, ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಕೆಎನ್ಆರ್ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಗಾಯಾಳು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೆಕ್ಕಿಲಾಡಿ ನಿವಾಸಿ ಅಬ್ದುಲ್ ರಹಿಮಾನ್ ಯುನಿಕ್ ಗಾಯಗೊಂಡವರು. ನ.25ರ ರಾತ್ರಿ ಘಟನೆ ನಡೆದಿತ್ತು.
‘ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಕಾಮಗಾರಿ ನಿರ್ವಹಣೆಯಲ್ಲಿ ಕೆಎನ್ಆರ್ ಸಂಸ್ಥೆ ವಹಿಸಿರುವ ನಿರ್ಲಕ್ಷ್ಯದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿಯಲ್ಲಿರುವ ಗುಂಡಿಗಳನ್ನೂ ಮುಚ್ಚಿಲ್ಲ. ದೂಳು ನಿಯಂತ್ರಿಸಲು ಪ್ರತಿನಿತ್ಯ ರಸ್ತೆಗೆ ನೀರು ಹಾಕಲಾಗುತ್ತಿದ್ದು, ಇದರಿಂದ ರಸ್ತೆ ಕೆಸರುಮಯವಾಗಿ ದ್ವಿಚಕ್ರ ವಾಹನಗಳು ನಿಯಂತ್ರಣಕ್ಕೆ ಸಿಗದೆ ಜಾರಿ ಅಪಘಾತ ಸಂಭವಿಸುತ್ತಿವೆ. ಈ ಅಪಘಾತಗಳಿಗೆ ಕೆಎನ್ಆರ್ ಸಂಸ್ಥೆಯೇ ನೇರ ಹೊಣೆ’ ಎಂದು ಅವರು ದೂರಿನಲ್ಲಿ ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.