ADVERTISEMENT

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ: ತಯಾರಿ ಆರಂಭಿಸಿದ ಬಿಜೆಪಿ

ಬೂತ್‌ ಮಟ್ಟದ ಸಮಿತಿಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 5:11 IST
Last Updated 7 ಜುಲೈ 2024, 5:11 IST
ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಪಕ್ಷ ಪ್ರಮುಖರು – ಪ್ರಜಾವಾಣಿ ಚಿತ್ರ
ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಪಕ್ಷ ಪ್ರಮುಖರು – ಪ್ರಜಾವಾಣಿ ಚಿತ್ರ   

ಮಂಗಳೂರು: ಪಕ್ಷವನ್ನು ತಳ ಮಟ್ಟದಲ್ಲಿ ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಬಿಜೆಪಿ ಜಿಲ್ಲಾ ಕಾರ್ಯಕಾರಣಿಯಲ್ಲಿ ಶನಿವಾರ ಸಮಾಲೋಚನೆ ನಡೆಯಿತು.

‘ಲೋಕಸಭಾ ಚುನಾವಣೆಯ ಫಲಿತಾಂಶದ ವಿಶ್ಲೇಷಣೆಯನ್ನೂ ಈಗಾಗಲೇ ನಡೆಸಲಾಗಿದೆ. ಎಲ್ಲೆಲ್ಲಿ ನಮ್ಮ ಪಕ್ಷ ಶಕ್ತಿಯನ್ನು ಹೊಂದಿದೆ. ಎಲ್ಲೆಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿದೆ ಎಂಬುದನ್ನು ಆಧರಿಸಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ’ ಎಂದು ಪಕ್ಷದ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.   

‘ಜಿಲ್ಲೆಯಲ್ಲಿ ಬೂತ್‌ ಮಟ್ಟದಲ್ಲಿ ಹಾಗೂ ಶಕ್ತಿಕೇಂದ್ರಗಳ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಮಂಡಲ ಸಮಿತಿಗಳಿಗೆ ವಹಿಸಲಾಗಿದೆ. ಎಲ್ಲೆಲ್ಲಿ ಬೂತ್‌ ಮಟ್ಟದ ಸಂಘಟನೆ ಸಕ್ರಿಯವಾಗಿಲ್ಲವೋ ಅಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಕ್ರಮವಹಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಹಾಲು, ತರಕಾರಿ, ಪೆಟ್ರೋಲ್, ಡೀಸೆಲ್, ಮದ್ಯದ ಬೆಲೆ ಹೆಚ್ಚಾಗಿದೆ. ಬೆಲೆ ಏರಿಕೆ ನಿತ್ಯದ ವಿದ್ಯಮಾನವಾಗಿಬಿಟ್ಟಿದೆ. ವಿದ್ಯುತ್ ಪರಿವರ್ತಕ ಅಳವಡಿಕೆ ಬೆಲೆ, ಜಮೀನು ನೋಂದಣಿ ಶುಲ್ಕವೂ ಹೆಚ್ಚಳವಾಗಿದೆ. ಈ ಎಲ್ಲ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ತಕ್ಕ ಬುದ್ಧಿ ಕಲಿಸಬೇಕು’ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಸಚೇತಕ ಎನ್.ರವಿಕುಮಾರ್ ಸಲಹೆ ನೀಡಿದರು.

‘ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆಯೂ ಜನರಿಗೆ ಮನವರಿಕೆ ಮಾಡಬೇಕು’ ಎಂದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. 

ಸಂಸದ ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರನ್ನು ಹಾಗೂ ಮಂಡಲಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಮೂಡುಬಿದಿರೆ ಶಾಸಕ ಅನಾರೋಗ್ಯದ ಕಾರಣ ಸಭೆಗೆ ಗೈರಾಗಿದ್ದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ,  ಮೇಯರ್ ಸುಧೀರ್ ಶೆಟ್ಟಿ, ಉಪಮೇಯರ್ ಸುನೀತಾ, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ ಭಾಗವಹಿಸಿದ್ದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ ಸ್ವಾಗತಿಸಿದರು. ಯತೀಶ್ ಆರ್ವಾರ್, ತಿಲಕರಾಜ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು. ಅಗಲಿದ ಗಣ್ಯರಿಗೆ ರಾಕೇಶ್ ರೈ ಕೆಡೆಂಜಿ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್‌ಕುಮಾರ್ ಬೊಟ್ಯಾಡಿ ಅಭಿನಂದನಾ ಭಾಷಣ ಮಾಡಿದರು.
 

‘ಸಿಬಿಐ ತನಿಖೆಯಾಗಲಿ’

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಎನ್.ರವಿಕುಮಾರ್ ಒತ್ತಾಯಿಸಿದರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿಯನ್ನು ಇಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಮುಡಾದಿಂದ 14 ಬದಲಿ ನಿವೇಶನಗಳನ್ನು ಸಿದ್ದರಾಮಯ್ಯ ತನ್ನ ಪತ್ನಿಯ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದಾರೆ. ₹ 1 ಕೋಟಿ ಬೆಲೆಯ ಜಮೀನಿಗೆ ₹ 35 ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದು ನ್ಯಾಯವೇ’ ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.