ಮಂಗಳೂರು: ತುಳುಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ಚಿತ್ರಗಳು ವಿವಾದ ಸೃಷ್ಟಿಸಿದ್ದು, ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಅವರ ‘ದಿ ಕಾಪಿಕಾಡ್ ಶೋ’ಗೆ ಬಹಿಷ್ಕಾರ ಹಾಕುವ ಬೆದರಿಕೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಅವರು ತಾವು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಸೆ. 4ರಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ದೇವದಾಸ್ ಕಾಪಿಕಾಡ್ ಅವರ ಸ್ಥಳೀಯ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ದೇವದಾಸ್ ಸದಸ್ಯತ್ವ ಪಡೆದಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕವು ತನ್ನ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಸದಾನಂದ ಗೌಡರು ಸಹ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ನಂತರದ ಬೆಳವಣಿಗೆಯಲ್ಲಿ, ಸೆ. 13 ಮತ್ತು 14ರಂದು ಸೌದಿ ಅರೇಬಿಯಾದಲ್ಲಿ ಆಯೋಜಿಸಿದ್ದ ದಿ ಕಾಪಿಕಾಡ್ ಶೋಗೆ ಬಹಿಷ್ಕಾರ ಹಾಕುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿವೆ. ಈ ಬಗ್ಗೆ ದೇವದಾಸ್ ಕಾಪಿಕಾಡ್ ಸ್ಪಷ್ಟನೆ ನೀಡಿರುವ ಧ್ವನಿ ಮುದ್ರಣ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೆಯಾಗುತ್ತಿದೆ.
‘ಬಿಜೆಪಿ ನಾಯಕರನ್ನು ಸೌಹಾರ್ದವಾಗಿ ಭೇಟಿಯಾಗಿದ್ದು, ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ, ಎಲ್ಲ ಪಕ್ಷಗಳ ಮುಖಂಡರ ಜೊತೆ ನನಗೆ ಸೌಹಾರ್ದ ಸಂಬಂಧ ಇದೆ’ ಎಂದು ಅವರು ಹೇಳಿಕೊಂಡಿದ್ದಾರೆ.
‘ಸದಸ್ಯತ್ವ ಅಭಿಯಾನದ ಭಾಗವಾಗಿ ಸಮಾಜದ ಗಣ್ಯ ವ್ಯಕ್ತಿಗಳು, ಕಲಾವಿದರ ಮನೆಗೆ ಭೇಟಿ ನೀಡುವುದು ಸಹಜ ಪ್ರಕ್ರಿಯೆ. ದೇವದಾಸ್ ಮನೆಗೆ ಭೇಟಿ ನೀಡಿದ್ದು ನಿಜ, ಹಾಗೆಂದ ಮಾತ್ರಕ್ಕೆ ಅವರು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದರ್ಥವಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.