ADVERTISEMENT

ಮಂಗಳೂರು: ಇಂಧನ ಬೆಲೆ ಏರಿಕೆ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 13:51 IST
Last Updated 17 ಜೂನ್ 2024, 13:51 IST

ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಾರನ್ನು ಹಗ್ಗದಲ್ಲಿ ಎಳೆದು ತಂದು, ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕಾರಿಗೆ ಪೆಟ್ರೋಲ್ ತುಂಬಿಸುವ ಮೂಲಕ ಸೋಮವಾರ ಇಲ್ಲಿ ಪ್ರತಿಭಟಿಸಿದರು.

ಸ್ಕೂಟರ್‌, ಬೈಕ್‌ಗಳನ್ನು ಪೆಟ್ರೋಲ್ ಬಂಕ್‌ವರೆಗೆ ಎಳೆದುಕೊಂಡು ಬಂದು, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಕಾರೊಂದಕ್ಕೆ ಹಗ್ಗ ಕಟ್ಟಿ ಪಿವಿಎಸ್ ವೃತ್ತದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಎಳೆದುಕೊಂಡು ಹೋಗಿ ಗಮನ ಸೆಳೆದರು. ಖಾಲಿ ಚೊಂಬು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಬದುಕಿಗೆ ಗ್ಯಾರಂಟಿ ಇಲ್ಲದಾಗಿದೆ. ಉಚಿತ ಗ್ಯಾರಂಟಿಗಳ ಭರವಸೆ ನೀಡಿ, ಜನರ ಬದುಕಿನ ಗ್ಯಾರಂಟಿ ಕಳೆದಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ದರ ಏರಿಕೆ ಹೆಚ್ಚಾಗಿದೆ. ಈಗ ಇಂಧನ ಬೆಲೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ದರ ಇಳಿಕೆ ಮಾಡುವವರೆಗೆ ಬಿಜೆಪಿ ಹೋರಾಟ ನಡೆಸಲಿದೆ’ ಎಂದರು.

ADVERTISEMENT

ಶಾಸಕ ಹರೀಶ್ ಪೂಂಜ ಮಾತನಾಡಿ, ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿರುವ ಕಾಂಗ್ರೆಸ್, ದರ ಏರಿಕೆಯ ಮೂಲಕ ಬಕ್ರೀದ್ ಹಬ್ಬಕ್ಕೆ ಉಡುಗೊರೆ ನೀಡಿದೆ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ‘ಇಂಧನ ಬೆಲೆಯನ್ನು ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ, ಬಡವರನ್ನು ಲೂಟಿ ಮಾಡಲು ಹೊರಟಿದೆ. ಗ್ಯಾರಂಟಿ ಭರವಸೆ ನೀಡಿ, ಜನರನ್ನು ಮರುಳು ಮಾಡಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಸರ್ಕಾರದ ನಡೆ ಜನರಿಗೆ ಈಗ ಅರ್ಥವಾಗುತ್ತಿದೆ. ಜನರು ಇನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ’ ಎಂದರು.

ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಪ್ರಮುಖರಾದ ಕ್ಯಾ.ಗಣೇಶ್ ಕಾರ್ಣಿಕ್, ಕಿಶೋರ್ ಕುಮಾರ್ ಪುತ್ತೂರು, ಜಗದೀಶ ಶೇಣವ, ನಿತಿನ್ ಕುಮಾರ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಡಾ.ಮಂಜುಳಾ ರಾವ್, ಪೂಜಾ ಪೈ, ಸುಮನಾ ಶರಣ್, ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಕಾಸ್ ಪುತ್ತೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.