ಮಂಗಳೂರು: ‘ಜಾತಿಯ ಹೆಸರಿನಲ್ಲಿ ದೇಶವನ್ನು ಸಂಘಟಿಸಿದ ಬಿಜೆಪಿ ನಾಯಕರಿಗೆ ಸಾವರ್ಕರ್ ಹೆಸರು ಎತ್ತುವ ನೈತಿಕತೆ ಇಲ್ಲ. ಕಾಂಗ್ರೆಸ್‌ಗಿಂತಲೂ ಹೀನಾಯವಾಗಿ ಧರ್ಮವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡಿದ್ದು, ಅಧಿಕಾರ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಸಾವರ್ಕರ್ ಹೆಸರು ಬಳಸುತ್ತಿದೆ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಟೀಕಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾರ್ಥ ರಾಜಕೀಯ ಮಾಡುವ ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಂಡು ನಂತರ ಸಾವರ್ಕರ್ ಬಗ್ಗೆ ಧ್ವನಿ ಎತ್ತಲಿ. ಸಾವರ್ಕರ್ ಕಟ್ಟಿದ ಅಖಿಲ ಭಾರತ ಹಿಂದೂ ಮಹಾಸಭಾ ಆಗಲಿ, ಅವರ ಅಖಂಡ ಭಾರತದ ಪರಿಕಲ್ಪನೆಯಾಗಲಿ, ಹಿಂದುತ್ವ ವಿಚಾರಧಾರೆಯಾಗಲಿ ಬಿಜೆಪಿಗೆ ಬೇಕಾಗಿಲ್ಲ. ಮುಂಬರುವ ಚುನಾವಣೆಗೆ ಸಾವರ್ಕರ್ ಹೆಸರು ಮತ್ತು ಭಾವಚಿತ್ರ ಮಾತ್ರ ಬೇಕಾಗಿದೆ. ಇದು ಬಿಜೆಪಿಯ ದಿವಾಳಿತನವನ್ನು ತೋರಿಸುತ್ತದೆ’ ಎಂದರು.
ಸಾವರ್ಕರ್ ಅವರನ್ನು ಬಿಜೆಪಿ ಒಪ್ಪುವುದಾದರೆ ಅವರ ಜನ್ಮ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವ ತಾಕತ್ತು ಇದೆಯೇ ಎಂದು ಸವಾಲೆಸೆದರು.
ಸಾವರ್ಕರ್ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಪುಕ್ಕಲು ಸ್ವಭಾವದವರು. ಗಾಂಧೀಜಿ ಹೇಗೆ ಭಾರತ ವಿಭಜನೆಗೆ ಕಾರಣರಾದರೋ ಹಾಗೆಯೇ ಸಿದ್ದರಾಮಯ್ಯ ಮುಸ್ಲಿಂ ‘ಏರಿಯಾ– ಹಿಂದೂ ಏರಿಯಾ’ ಎಂದು ವಿಭಜಿಸುವ ಮೂಲಕ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಲು ಯೋಚಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.